ಭೂಮಿ ಬಳಗ ಮಹಿಳಾ ಸಂಘಟನೆ ಅಸ್ತಿತ್ವಕ್ಕೆ

ಲೋಕದರ್ಶನ ವರದಿ

ಗೋಕಾಕ 30: ಭೂಮಿಯನ್ನು ಉತ್ತಿ-ಬಿತ್ತಿ "ಕೃಷಿ-ಸಂಸ್ಕೃತಿ"ಯನ್ನು ಆರಂಭ ಮಾಡಿದವಳೇ ಹೆಣ್ಣು. ಈ ಸಂಸ್ಕೃತಿಯನ್ನು ಬಿಂಬಿಸುವ ಹಾಡು, ಕಥೆ, ಗಾದೆ, ಒಡಪು, ಒಗಟುಗಳನ್ನು ಪರಂಪರಾಗತವಾಗಿ ಹೇಳುತ್ತ ಬಂದ, ಗ್ರಾಮೀಣ ಸಾಹಿತ್ಯ (ಜನಪದ ಸಾಹಿತ್ಯ)ದ ಹುಟ್ಟು-ಬೆಳವಣಿಗೆಯಲ್ಲಿ ಮುಕ್ಕಾಲು ಪಾಲು ಅವಳದೇ. ಸಂಪ್ರದಾಯ, ಆಚರಣಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಂಥವಳೂ ಅವಳೆ. ಹೀಗೆ ಕರ್ನಾಟಕ-ಭಾರತೀಯ ಸಂಸ್ಕೃತಿ-ನಾಗರಿಕತೆಗಳಿಗೆ ಶ್ರೀಕಾರ ಹಾಕಿ ಬೆಳೆಯಿಸಿಕೊಂಡು ಬಂದುದರಲ್ಲಿ ಅವಳಿಗೆ ಅಗ್ರಪಾತ್ರವಿದೆ. ಹೀಗಾಗಿ ಹೆಣ್ಣನ್ನು ಭೂಮಿಗೆ ಹೋಲಿಸುತ್ತ ಬಂದಿದೆ ನಮ್ಮ ಬುದ್ಧಿವಂತ ವರ್ಗ. ಆದರೆ ಜನಪದ ಸಾಹಿತ್ಯದ ಪ್ರಚಾರ-ಪ್ರಸಾರ ಇತ್ಯಾದಿಗಳಿಗೆ ಗಂಡುಮಕ್ಕಳ ನಾನಾಸಂಘಟನೆಗಳಿವೆ, ಹೆಣ್ಣುಮಕ್ಕಳ ಹೆಸರಿನ ಸಂಘಟನೆಗಳು ಈವರೆಗೂ ಇದ್ದಂತಿಲ್ಲ. ಈ ಕೊರತೆಯನ್ನು ನೀಗಿಸಲು ಈಚೆಗೆ ಜನೆವರಿ-27 ರಂದು ಗೋಕಾಕ ನಗರದ ಬಣಗಾರ ಗಲ್ಲಿಯ ಜಾಗೃತ ಮಹಿಳಾ ಸಮಾಜದವರು, ಶಂಕರಲಿಂಗ ದೇವಸ್ಥಾನದಲ್ಲಿ ಸಭೆ ಸೇರಿ ಜನಪದ ಸಾಹಿತ್ಯದ ಪುನರುಜ್ಜೀವನದ ಕಾಯಕಲ್ಪ ಚಿಕಿತ್ಸೆಗಾಗಿ, "ಭೂಮಿ ಬಳಗ" ಎನ್ನುವ ಅರ್ಥಪೂರ್ಣ ಶಿರೋನಾಮೆಯ ಮಹಿಳಾ ಜಾನಪದ ಸಂಘಟನೆಯನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ. ಜಾನಪದಕ್ಕೇ ಮೀಸಲಾದ ಮಹಿಳಾ ಸಂಘಟನೆಗಳು ರಾಜ್ಯದಲ್ಲಿಯೇ ಅಪರೂಪ, ವಿರಳ. ಈ ಅಪರೂಪದ ಸಂಘಟನೆಯ ಮಹಿಳಾ ಪದಾಧಿಕಾರಿಗಳು ಇಂತಿದ್ದಾರೆ ಅಧ್ಯಕ್ಷರು: ಡಾ.ಶಶಿಕಲಾ ಕಾಮೋಜಿ, ಕಾರ್ಯದರ್ಶಿಗಳು: ಶೈಲಾ ಮೂತರ್ೇಲಿ ಮತ್ತು ವಿನೂತಾ ನಾವಲಗಿ, ಖಜಾಂಚಿ: ಸುನಂದಾ ಹೆಬ್ಬಳ್ಳಿ ಮತ್ತು 21 ಜನ ಕಾರ್ಯಕಾರಿ ಸಮಿತಿಯ ಸದಸ್ಯರಿರುತ್ತಾರೆಂದು ಸಂಘಟನೆಯ ಮಾರ್ಗದರ್ಶಕ, ಕರ್ನಾಟಕ ಜಾನಪದ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಡಾ. ಸಿ.ಕೆ.ನಾವಲಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.