ವಿಜಯಪುರ ಮಾ.06: ರಸ್ತೆ ದಾಟುವಾಗ ಹಾಗೂ ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಹೇಳಿದರು.
ಅವರು, ಮಾ.6 ರಂದು ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಸಡಕ ಸುರಕ್ಷಾ ಜೀವನ ರಕ್ಷಾ ಎಂಬ ಘೋಷ ವಾಕ್ಯದಡಿ ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಾರಿಗೆ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಕೆ ಮಾಡಬಾರದು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ತಿಳಿ ಹೇಳಬೇಕು. ವಾಹನವನ್ನು ನಿಗದಿತ ವೇಗದಲ್ಲಿ ಚಲಾಯಿಸಬೇಕು ಎಂದು ಅವರು ಹೇಳಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಗಾಂಧಿಚೌಕ, ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಾದ ವಸೀಮ್ ಬಾಬಾ ಮುದ್ದೇಬಿಹಾಳ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಯಾದ ಎಸ್.ಬಿ.ಕುರುಬರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಶ್ರೀಮತಿ ಪಿ.ಎಸ್.ಕೋಲಾರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್.ಜೆ.ಬಿರಾದಾರ, ಮೋಟಾರ್ ವಾಹನ ನೀರೀಕ್ಷಕರಾದ ರವಿ ಭಿಸೇ, ಸಂತೋಷ ಪಾಟೀಲ, ಜಿ.ಎಸ್.ರಾಕೇಶ್, ಮಹಮ್ಮದ್ ಹುಸೇನ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ವಿವಿದ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.