ಅಂಬೇಡ್ಕರ್ ತತ್ವಾದರ್ಶ ಅನುದಿನವೂ ಪಾಲಿಸಿ: ಪ್ರೊ.ಜಾಲವಾದಿ
ತಾಳಿಕೋಟಿ 05: ಸಮಾಜದಲ್ಲಿರುವ ದೀನ ದಲಿತ ಹಾಗೂ ಶೋಷಿತ ಜನರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಅವರು ಗೌರವಯುತ ಬದುಕು ನಡೆಸಲು ಶಕ್ತಿ ತುಂಬಿದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕಿನ ಆದರ್ಶಗಳನ್ನು ಅನುದಿನವೂ ಅನುಸರಿಸುವ ಅಗತ್ಯ ಇದೆ ಎಂದು ಪ್ರೊ. ಬಸವರಾಜ ಜಾಲವಾದಿ ಹೇಳಿದರು.
ತಾಲೂಕಿನ ತುಂಬಗಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ)ಗ್ರಾಮ ಶಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಮಾಜ ತುಂಬಗಿ ಇವರ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಇವತ್ತು ದಲಿತ ಸಮಾಜ ಜಾಗೃತರಾಗುವ ಅಗತ್ಯವಿದೆ. ಅಂಬೇಡ್ಕರ್ ಅವರನ್ನು ಆರಾಧಿಸುವ ಮೂಲಕ ಅವರ ಬದುಕಿನ ಸಿದ್ಧಾಂತವನ್ನು ಅಡಗಿಸುವ ಪ್ರಯತ್ನ ಮಾಡಬೇಡಿ ಜೀವನದಲ್ಲಿ ದಂದ್ವವಾದ ಬೇಡ, ಅಂಬೇಡ್ಕರ್ ವಾದ ಮಾತ್ರವಿರಲಿ, ಎಲ್ಲ ರೀತಿಯ ಮೌಢ್ಯಗಳಿಂದ ಹೊರಬಂದು ಶಿಕ್ಷಣವಂತರಾಗಲು ಪ್ರಯತ್ನಿಸಿ ಶಿಕ್ಷಣದಿಂದಲೇ ಸಮಾಜದ ಉನ್ನತಿ ಸಾಧ್ಯ ಎಂದರು.
ಉಪನ್ಯಾಸಕಿ ಡಾ.ಸುಜಾತಾ ಚಲವಾದಿ ಮಾತನಾಡಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಸಂವಿಧಾನಕ್ಕಿಂತ ಮುಂಚೆ ಸಮಾಜದಲ್ಲಿ ಮಹಿಳೆಗೆ ಯಾವ ಸ್ಥಾನಮಾನವೂ ಇರಲಿಲ್ಲ, ಡಾ.ಅಂಬೇಡ್ಕರ್ ಅವರು ಅವರಿಗೆ ಬದುಕುವ ಹಕ್ಕನ್ನು ಕೊಡುವುದರ ಜೊತೆಗೆ ಆಸ್ತಿಯಲ್ಲಿ ಸಮಾನ ಪಾಲವಿದೆ ಎಂದು ಹೇಳಿ ಅವಳ ಬದುಕಿಗೆ ಘನತೆ ತಂದು ಕೊಟ್ಟರು. ಸಮಾಜದ ತಾಯಂದಿರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಶಿಕ್ಷಣದಿಂದ ಮಾತ್ರ ನಮಗೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ಮುಖಂಡ ಜೈ ಭೀಮ ಮುತ್ತಗಿ, ನಿಂಗಪ್ಪ ಚಲವಾದಿ, ನ್ಯಾಯವಾದಿ ಪ್ರಭಾಕರ ಗುಡಗುಂಟಿ ಅಂಬೇಡ್ಕರ್ ಅವರ ಬದುಕಿನ ಸಂದೇಶದ ಕುರಿತು ಮಾತನಾಡಿದರು. ಹರೀಶ ಬಸರಿಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಹೇಶ ಚಲವಾದಿ ನಿರೂಪಿಸಿ ವಂದಿಸಿದರು.
ವೇದಿಕೆ ಕಾರ್ಯಕ್ರಮ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಬಾಬಾ ಸಾಹೇಬರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಗಣ್ಯರಾದ ಬಸನಗೌಡ ನಾಡಗೋಡ, ಶಿವಲಿಂಗಪ್ಪ ಢವಳಿಗಿ, ಭೀಮನಗೌಡ ಮಂಗ್ಯಾಳ, ಚಂದ್ರಶೇಖರ್ ಸಜ್ಜನ, ಸಂಗನಗೌಡ ಲಿಂಗದಳ್ಳಿ, ಶರಣಪ್ಪ ತೋಟದದೇವೇಂದ್ರ ಹಾದಿಮನಿ, ಎಎಸ್‌ಐ ಚಂದ್ರಶೇಖರ ಭಂಗಿ, ನಬಿ ರಸೂಲ ನಾಯ್ಕೋಡಿ, ಡಿಎಸ್‌ಎಸ್ ತಾಲೂಕ ಸಂಚಾಲಕ ಮಹಾಂತೇಶ ಕಟ್ಟಿಮನಿ, ಕಾಶಿನಾಥ ಕಾರಗನೂರ, ವಿಶ್ವನಾಥ ಚಲವಾದಿ, ಗುರುಪ್ರಸಾದ ಬಿ.ಜಿ. ಭೀಮಾಶಂಕರ ರತ್ನಾಕರ, ಶ್ರೀನಿವಾಸ ಓಲೇಕಾರ, ಹರೀಶ ನಾಟಿಕರ, ಗುರು ದೇವರಹಿಪ್ಪರಗಿ, ಸಂಘಟನೆಯ ಪದಾಧಿಕಾರಿಗಳು ಗ್ರಾಮದ ಗುರುಹಿರಿಯರು ಹಾಗೂ ಮಹಿಳೆಯರು ಇದ್ದರು.