ಜಾನಪದ ಕಲೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ

ವಿಜಯಪುರ, 9 : ಜಾನಪದ ಕಲೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವದಿಂದ ಅವು ಕಣ್ಮರೆಯಾಗುತ್ತಿರುವುದು ವಿಷಾದನೀಯ. ಜಾನಪದ ಕಲೆಯ ಉಳವಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಬಸವನ ಬಾಗೇವಾಡಿ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಮಂತ್ರಾಲಯ, ನೆಹರು ಯುವ ಕೇಂದ್ರ, ವಿಜಯಪುರ ಡಾ. ಅಂಬೇಡ್ಕರ ರೂರಲ್ ಡೆವಲಪಮೆಂಟ್ ಸೂಸೈಟಿ, ದೇಗಿನಾಳ ಇವುಗಳ  ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲಾ ಮಟ್ಟದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡು ಭವ್ಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿದೆ. ನಾಡಿಗೆ ಜಾನಪದ ಕಲಾವಿದರ ಕೊಡುಗೆ ಅಪಾರವಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯದ ಕಲಾವಿದರಿಗೆ ನೀಡುವ ಮಾಶಾನ ಬಹಳ ಕಡಿಮೆಯಾಗಿದೆ. ರಾಜ್ಯ ಸರಕಾರದಿಂದ ನೀಡುತ್ತಿರುವ ಮಾಶಾಸನ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ.  ಮೊಬೈಲ್ ಯುಗದಲ್ಲಿ ಜಾನಪದ ಕಲೆ ಅವಸಾನದತ್ತ ಸಾಗುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದರು. 

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಜಾವಿದ ಜಮಾದಾರ ಮುಖ್ಯ ಅತಿಥಿಯಾಗಿ ಮಾತನಾಡಿ, ಜಾನಪದ ಸಾಹಿತ್ಯ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಜಾನಪದ ಗೀತೆಗಳು ಮತ್ತು ಸಾಹಿತ್ಯ ಮರೆಯಾಗುತ್ತಿವೆ. ಉತ್ತಮ ಸಾಹಿತ್ಯದ ಜಾಗದಲ್ಲಿ ಬೇರೆ ಸಾಹಿತ್ಯ ಸೇರಿಕೊಂಡಿರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಅನಕ್ಷರಸ್ಥ ಮಹಿಳೆ, ರೈತರು ಹಾಡುವ ಗೀತೆಗಳು ಮಾಯವಾಗಿವೆ. ಮನಸ್ಸಿನಲ್ಲಿ ಉತ್ತಮ ಆಲೋಚನೆ ಉದ್ಭವ ಆಗುವಂತೆ ನೋಡಿಕೊಳ್ಳುವ ಶಕ್ತಿ ಜಾನಪದಕ್ಕಿದೆ. ಯುವಕರು ಅದನ್ನು ಉಳಿಸಿ ಬೆಳೆಸಬೇಕೆಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ವಹಿಸಿದ್ದರು. ವೇದಿಕೆಯ ಮೇಲೆ ಡಿ.ಎಸ್.ಎಸ್. ಸಂಚಾಲಕ ಸುರೇಶ ಮಣೂರ, ಡೊಂಗೆ, ಅಮರೇಶ ಮಿಣಜಗಿ, ಯುವ ಮುಖಂಡ ಸುರೇಶ ಬಿಜಾಪೂರ,ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಅಂಬೇಡ್ಕರ ಸಂಘದ ಅಧ್ಯಕ್ಷ ಪ್ರಕಾಶ ಪಡಸಲಗಿ, ಹಾಸ್ಯ ಕಲಾವಿದರಾದ ಗೋಪಾಲ ಇಂಚಗೇರಿ, ಗೋಪಾಲ ಹೊಸೂರು, ಕಲಾವಿದೆ ದಿವ್ಯಾ ಬೀಸೆ ಉಪಸ್ಥಿತರಿದ್ದರು.ಜಿಲ್ಲೆಯ  ವಿವಿಧ ಯಾಲೂಕುಗಳ 50 ಜಾನಪದ ಕಲಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.