ನವಲಗುಂದ 18: ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗುಮ್ಮಗೋಳದಲ್ಲಿ ಶುಕ್ರವಾರದಂದು ಸರ್ಕಾರದ ಸುಚೇತನ ಕಾರ್ಯಕ್ರಮದ ಅಡಿಯಲ್ಲಿ ಜಾನಪದ ಜಾತ್ರೆಯನ್ನು ಅದ್ದೂರಿಯಾಗಿ ನೆರವೇರಿಸಿ ಮಕ್ಕಳಿಂದ ವೇಷಭೂಷಣಗಳ ಮೂಲಕ ಎತ್ತಿನ ಬಂಡೆ , ರೈತರ ಕಣವನ್ನು ಮಾಡಿ ಉಪಯೋಗಿಸುವ ರೀತಿ. ಮೇಟಿ, ಮ್ಯಾರಕೋಲು, ಜಂತಕುಂಟೆ, ಸೆಲ್ ಕಟ್ಟಿಗೆ, ಜೋಳದರಾಶಿ ತೂರುವ ಸನ್ನಿವೇಶ ದನದ ಕೊಟ್ಟಿಗೆ, ಹೈನುಗಾರಿಕೆ, ಕುರಿ ಸಾಕಾಣಿಕೆ ಗುಡಿಸಲು ಮಜ್ಜಿಗೆ ಕಡೆಯುವುದು, ಬೀಸುವದು , ಕುಟ್ಟುವದು , ಸೀಮಂತ, ಮಗುವಿನ ನಾಮಕರಣ, ಹಂತಿ ಪದ, ಲಾವಣಿ ಪದ, ಗಿಗಿ ಪದ, ಜಾನಪದಗಳನ್ನು ಹಾಡುವುದರ ಮೂಲಕ ಹಳ್ಳಿಯಲ್ಲಿ ನಡೆಯುವ ಅನೇಕ ಸಂದರ್ಭದ ಸನ್ನಿವೇಶಗಳನ್ನು, ಮಕ್ಕಳಿಂದ ರೂಪಕ ದೃಶ್ಯಗಳನ್ನು ಮಾಡಿಸಿ ಜನರ ಮನಸ್ಸಿನಲ್ಲಿ ಗತವೈಭವದ ಹಳ್ಳಿಯ ಸೊಗಡನ್ನು ನೆಲೆಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ,ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಪ್ರಧಾನ ಗುರುಗಳು ಹಾಗೂ ಶಿಕ್ಷಕ ಬಳಗ, ತಾಯಂದಿರು ಹಾಗೂ ಯುವಕರು ಮತ್ತು ರೈತ ಬಾಂಧವರಿದ್ದರು.
"ಇಂದಿನ ಮಕ್ಕಳಿಗೆ ನಾವು ಸಾಂಪ್ರದಾಯಿಕವಾಗಿ ವಕ್ಕಲುತನಕ್ಕೆ ಬಳಸುತ್ತಿದ್ದಂತಹ ಹಲವಾರು ಸಾಮಗ್ರಿಗಳ ಪರಿಚಯವೇ ಇಲ್ಲ, ಅವುಗಳನ್ನು ನಾವು ಈ ಕಾರ್ಯಕ್ರಮದ ಮೂಲಕ ಪರಿಚಯಿಸಲು ಪ್ರಯತ್ನಿಸಿದ್ದೇವೆ. ಮನೆಯಲ್ಲಿ ಮಕ್ಕಳಿಗೆ ನಮ್ಮ ಸಂಪ್ರದಾಯ ಸಂಸ್ಕೃತಿಯನ್ನು ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ."
ಎಂ.ಡಿ. ಚುಳಕಿ
ಶಾಲಾ ಮುಖ್ಯೋಪಾಧ್ಯರು