ಶೀಘ್ರವೇ ಮೈಸೂರು ವಿಮಾನ ನಿಲ್ದಾಣದಿಂದ ಊಟಿ, ಮಡಿಕೇರಿಗೆ ಶೀಘ್ರವೇ ಫ್ಲೈ ಬಸ್ ಸೇವೆ

ಮೈಸೂರು, ಜ 18,ಪ್ರವಾಸಿಗರಿಗಾಗಿ ಮೈಸೂರು ವಿಮಾನ ನಿಲ್ದಾಣದಿಂದ ಊಟಿ, ಮಡಿಕೇರಿಗೆ ಶೀಘ್ರವೇ ಫ್ಲೈಬಸ್ ಸೇವೆಯನ್ನು ಆರಂಭಿಸಲು ಸಂಬಂಧಿತ ಇಲಾಖೆಗಳು ಉದ್ದೇಶಿಸಿವೆ. ಸಾರ್ವಜನಿಕರಿಂದ ಸಲಹೆಗಳು ಮತ್ತು ಸಮಗ್ರ ಸಮೀಕ್ಷೆಯನ್ನು ಈ ಯೋಜನೆ ಆಧರಿಸಿದೆ. ಸೇವೆಯನ್ನು ಆರಂಭಿಸಲು ಕೆಎಸ್ ಆರ್ ಟಿಸಿಯೊಂದಿಗೆ ಮಾತುಕತೆ ನಡೆದಿದೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆ. ಈ ಸಂಬಂಧ ಕೆಎಸ್‍ಆರ್ ಟಿಸಿ ಅಧಿಕಾರಿಗಳೊಂದಿಗೆ ಮುಂದಿನ ವಾರ ಸಭೆ ನಿಗದಿಯಾಗಿದೆ. ಆ ನಂತರ ಫ್ಲೈ ಬಸ್ ಸೇವೆಯನ್ನು ನಗರದ ವಿಮಾನನಿಲ್ದಾಣದಿಂದ ಆರಂಭಿಸಲಾಗುವುದು. ಈ ಸೇವೆಯು ಮೈಸೂರಿಗೆ ಬರುವ ಪ್ರವಾಸಿಗರಿಗೆ ಪ್ರಯೋಜನವಾಗಲಿದ್ದು, ಊಟಿ ಇಲ್ಲವೇ ಮಡಿಕೇರಿಗೆ ನೇರವಾಗಿ ತೆರಳಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ಮಂಡಕಳ್ಳಿ ವಿಮಾನನಿಲ್ದಾಣದಿಂದ ನಗರಕ್ಕೆ ಬಸ್ ಸೇವೆ ಆರಂಭಿಸುವ ಯೋಜನೆಯೂ ಇದೆ. ಸದ್ಯ, ವಿಮಾನ ನಿಲ್ದಾಣದಲ್ಲಿ ಪ್ರತಿದಿನ 16 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ(ಕೆಎಸ್‍ಐಎಸ್‍ಎಫ್)ಯನ್ನು ನಿಯೋಜಿಸಲಾಗುತ್ತಿದೆ. ಮೈಸೂರಿನಲ್ಲಿ ಇತ್ತೀಚೆಗೆ ಈ ಕುರಿತಂತೆ ಹೆಚ್ಚುವರಿ ಡಿಜಿಪಿ(ಆಂತರಿಕ ಭದ್ರತೆ) ಪ್ರತಾಪ್ ರೆಡ್ಡಿಯವರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.