ಗದಗ 27: ಗದಗ ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇವರ ಸಹಯೋಗದಲ್ಲಿ ನಗರದ ಕೆ.ಹೆಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದ ಹತ್ತಿರವಿರುವ ವಿ.ಡಿ.ಎಸ್.ಟಿ ಮೈದಾನದಲ್ಲಿ ಮಾರ್ಚ್ 01 ರಿಂದ ಮಾರ್ಚ್ 03ರವರೆಗೆ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಸರಸ್ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರೈತರು ಬೆಳೆದ ಹೂವು ಮತ್ತು ಹಣ್ಣುಗಳ ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭರತ್.ಎಸ್.ರವರು ತಿಳಿಸಿದ್ದಾರೆ.
ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಬೆಂಬಲ ನೀಡುವ ಉದ್ದೇಶದಿಂದ ಸರಸ್ ಮೇಳವನ್ನು ಆಯೋಜಿಸಲಾಗಿದ್ದು ಇದರ ಜೊತೆಗೆ ಫಲಪುಷ್ಪ ಪ್ರದರ್ಶನವೂ ಸಹಿತ ಒಂದೇ ಸೂರಿನಡಿ ವ್ಯವಸ್ಥೆಗೊಳಿಸಲಾಗಿರುತ್ತದೆ. ಸರಸ್ ಮೇಳಕ್ಕಾಗಿ 30 ಮಳಿಗೆಗಳನ್ನು ತೆರೆಯಲಾಗಿದೆ. ಗದಗ ಜಿಲ್ಲೆಯ 20 ಹಾಗೂ ಬೇರೆ ಬೇರೆ ಜಿಲ್ಲೆಯ 10 ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ವಸ್ತುಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.
ಮಾರ್ಚ್ 01 ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ. ಶರಣಪ್ರಕಾಶ ರುದ್ರ್ಪ ಪಾಟೀಲ, ಸಂಸದರು, ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರು ಹಾಗೂ ವಿವಿಧ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 08 ಗಂಟೆಯವರೆಗೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ಐಫೆಲ್ ಟವರ್, ಲಕ್ಕುಂಡಿಯ ಬ್ರಹ್ಮ ಜೀನಾಲಯ ಹಾಗೂ ಸಬರಮತಿ ಆಶ್ರಮದ ಪ್ರತಿಕೃತಿ ಹಾಗೂ ವಿವಿಧ ಬಗೆಯ ಹೂವುಗಳಿಂದ ಹಲವಾರು ರಚನೆಗಳನ್ನು ನಿರ್ಮಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗಿದೆ. ಇದಲ್ಲದೇ, ಸ್ವ-ಸಹಾಯ ಗುಂಪಿನ ಮಹಿಳೆಯರು ಸಿದ್ದಪಡಿಸಿದ ಕಾಟನ್ ಸೀರೆಗಳು, ಸಿದ್ಧ ಉಡುಪುಗಳು, ಆಟಿಕೆ ಸಾಮಾನು ಇತ್ಯಾದಿಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಳಿಗೆಗಳಲ್ಲಿ ಗ್ರಾಮೀಣ ಸೊಗಡಿನ ತಿಂಡಿ-ತಿನಿಸುಗಳು ಸಹ ಲಭ್ಯವಿದ್ದು. ರೈತರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.