ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಜಿಲ್ಲೆಯ ನದಿ ತೀರದ ಗ್ರಾಮಗಳು ಮತ್ತೆ ಪ್ರವಾಹಕ್ಕೆ ಒಳಗಾಗುತ್ತಿವೆ. ರಕ್ಷಣಾ ಕಾರ್ಯಕ್ಕೆ 2 ಎನ್ಡಿಆರ್ಎಪ್ ಹಾಗೂ ರೆಸ್ಕ್ಯೂ ತಂಡಗಳನ್ನು ತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಈ ವಿಷಯ ತಿಳಿಸಿದ ಅವರು ಈಗಾಗಲೇ ಕೊಣ್ಣೂರು ಸೇತುವೆ ಸೇರಿದಂತೆ 14 ಸೇತುವೆಗಳು ಮುಳುಗಿ ಹೋಗಿವೆ. ಪ್ರವಾಹ ಪೀಡಿತವಾಗಬಹುದಾದ ಹಳ್ಳಿಗಳಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಅಂತಹ ಹಳ್ಳಿಗಳಲ್ಲಿ ಡಂಗೂರ ಸಾರುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಮುಧೋಳ ತಾಲೂಕಿನ ನಂದಗಾವ್ ಮತ್ತು ಜಮಖಂಡಿ ತಾಲೂಕಿನ ಅಸ್ಕಿ ಗ್ರಾಮಕ್ಕೆ ನೀರು ಬಂದಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಆ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರದ ಗ್ರಾಮದ ಜನತೆಗೆ ಮತ್ತೊಮ್ಮೆ ವಿನಂತಿಸಲಾಗುತ್ತಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಸದ್ಯ ಮಹಾರಾಷ್ಟ್ರದ ಕೊನಿಯಾ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದ್ದು, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲಿಂದ ನೀರು ಹೊರಬಿಡುವ ಕಾರ್ಯ ನಡೆದಿದ್ದರೂ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಬಿಡುಗಡೆಗೊಳಿಸಬಾರದೆಂದರು ಕೂಡಾ ಅಲ್ಲಿಯ ರತ್ನಗಿರಿ, ಕೊಂಕಣ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿರುವದರಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಲಿ, ನಾವಾಗಲಿ ಯಾರು ಕೂಡಾ ನೀರನ್ನು ಹಿಡಿದಿಡಲು ಸಾಧ್ಯವಿಲ್ಲ. ಅಲ್ಲದೇ ಬಂದ ನೀರನ್ನು ಬೇರೆಡೆ ತಿರುಗಿಸಲು ಸಾಧ್ಯವಿಲ್ಲದ ಕಾರಣ ನದಿಗಳ ಮುಖಾಂತರವೇ ನೀರನ್ನು ಹೊರಹಾಕುವುದು ಅನಿವಾರ್ಯವೆಂದರು. ಇದೇ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಇದ್ದರು.