ಬೆಂಗಳೂರು, ಆ 30 ಪ್ರವಾಹದಿಂದ ಎಂಟು ಸಾವಿರ ಕೋಟಿ ರೂಪಾಯಿ ಮೊತ್ತದ ರಸ್ತೆಗಳು, ಸೇತುವೆಗಳು ಹಾನಿಯಾಗಿದ್ದು, ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಲು 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿಯ 645 ಕಿ.ಮೀ. ಉದ್ದದ ರಸ್ತೆ, ರಾಜ್ಯ ಹೆದ್ದಾರಿಯ 1166 ಕಿ.ಮೀ., ಜಿಲ್ಲಾ ಸಂಪರ್ಕಿಸುವ 2341 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ ಎಂದು ವಿವರಿಸಿದರು. ಇನ್ನು ರಾ.ಹೆದ್ದಾರಿಯ 34 ಸೇತುವೆ, ರಾಜ್ಯ ಹೆದ್ದಾರಿಯ 432, ಜಿಲ್ಲಾ ಸಂಪರ್ಕ ರಸ್ತೆಗಳಲ್ಲಿನ 696 ಸೇತುವೆಗಳು ಹಾನಿಗೊಳಗಾಗಿವೆ. ಒಟ್ಟು ಹಾನಿಯಾಗಿರುವ ಮೊತ್ತ 8 ಸಾವಿರ ಕೋಟಿ ರೂ. ತುರ್ತಾಗಿ 500 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಜತೆಗೆ ರಸ್ತೆಗಳ ನಿರ್ವಹಣೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಇನ್ನು ಸಹಾಯಕ ಎಂಜನಿಯರ್ ಗಳು ಕಡ್ಡಾಯವಾಗಿ ಬೆಳಿಗ್ಗೆ ಸೈಟ್ ವಿಸಿಟ್ ಹೋಗಬೇಕು. ಮಧ್ಯಾಹ್ನ ಕಚೇರಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ತಿಂಗಳ ವರದಿ ನೀಡಬೇಕು. ಅಧಿಕಾರಿಗಳು ಕಚೇರಿ ಕೇಂದರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಬೇಕು ಎಂದು ಖಡಕ್ ಸೂಚನೆ ನೀಡಿದರು. ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿಯೇ ಬಹಳಷ್ಟು ಮಂದಿ ಅವೈಜ್ಞಾನಿಕ ಹಂಪ್ಸ್ ಗಳಿಂದ ಸಾಯುತ್ತಿದ್ದಾರೆ. ಹೀಗಾಗಿ ಅವೈಜ್ಞಾನಿಕ ರೋಡ್ ಹಂಪ್ಸ್ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ 10 ಸಾವಿರ ಕೋಟಿ ರೂ. ಅನುದಾನ ಇಲಾಖೆಯಲ್ಲಿದ್ದು, ಬಿಲ್ ಬಾಕಿ ಮೊತ್ತ 2500 ಕೋಟಿ ರೂ. ಇದೆ ಎಂದರು. ರಸ್ತೆ, ಸೇತುವೆಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿರುವುದರಿಂದ ಈ ಬಾರಿ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ರಾಷ್ಟ್ರ ರಾಜಕಾರಣದಲ್ಲಿ ಮೋದಿ ಸಕ್ರಿಯರಾಗಿರುವವರೆಗೂ, ರಾಜ್ಯದಲ್ಲಿ ಯಡಿಯೂರಪ್ಪ ಸಕ್ರಿಯರಾಗಿರುವವರೆಗೂ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂದು ಕಾರಜೋಳ ತಿಳಿಸಿದರು. ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನವರಿಗೆ ಮುಂದಿನ 10 ವರ್ಷ ಪ್ರತಿಭಟನೆ ಮಾಡುವುದೇ ಕೆಲಸ. ಅರವತ್ತು ವರ್ಷ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದ್ದಾರೆ. ಇನ್ನು ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಷ್ಟೇ ಅವರ ಕೆಲಸ ಎಂದು ಟೀಕಿಸಿದರು.