ಬಾಗಲಕೋಟೆ17: ಇತ್ತೀಚೆಗೆ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ನೋವಿಗೆ ಸ್ಪಂಧಿಸಿ ರಕ್ಷಣಾ ಕಾರ್ಯದಲ್ಲಿ ಹಾಗೂ ಅಗತ್ಯ ವಸ್ತುಗಳ ವಿತರಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರೆಡ್ಕ್ರಾಸ್ ಸಂಸ್ಥೆಗೆ ರಾಜ್ಯಪಾಲ ವಜುಬಾಯಿ ವಾಲಾ ಅವರು ಬೆಂಗಳೂರಿನ ರಾಜಭವನದಲ್ಲಿ ರವಿವಾರ ಉತ್ತಮ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ರೆಡ್ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಚೇರಮನ್ ಆನಂದ ಜಿಗಜಿನ್ನಿ, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಗಮೇಶ ವೈಜಾಪೂರ, ಎಂ.ಬಿ.ಬಳ್ಳಾರಿ, ಕಾರ್ಯದರ್ಶಿ ವೀರಣ್ಣ ಅಥಣಿ, ವಿನೋದ ಜಿಗಜಿನ್ನಿ ಇದ್ದರು.
ರೆಡ್ಕ್ರಾಸ್ ಸಂಸ್ಥೆ ಪ್ರವಾಹ ಸಂದರ್ಭದಲ್ಲಿ 46 ದಿನಗಳ ಕಾಲ 48 ಹಳ್ಳಿಗಳಿಗೆ ಅವಶ್ಯಕ ಸಾಮಗ್ರಿಗಳನ್ನು ಜಿಲ್ಲಾ ಘಟಕ ಪೂರೈಕೆ ಮಾಡಿದೆ. ಬೆಂಗಳೂರಿನ ಇನ್ಪೋಸಿಸ್ ಸಂಸ್ಥೆ, ಐಬಿಎಂ ಮೆಸೆಂಜರ್, ಪೀಣ್ಯ ಇಂಡಸ್ಟ್ರೀಯಲ್ ಎಸ್ಟೆಟ್ನ ಜಿಮ್ಖಾನಾ ಕ್ಲಬ್ ವಂಡರ್ಸ ಕ್ಲಬ್ ಸೇರಿದಂತೆ ಮುಂತಾದ ಸಂಸ್ಥೆಗಳು ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ವಿವಿಧ ಸಂಘ ಸಂಸ್ಥೆಗಳು ನೀಡಿದ ವಸ್ತುಗಳನ್ನು ಅಚ್ಚುಕಟ್ಟಾಗಿ ಸಂತ್ರಸ್ತರಿಗೆ ವಿತರಿಸಿದೆ.
ಅದೇ ರೀತಿಯಾಗಿ ನವದೆಹಲಿಯ 2 ಕ್ರಾಸ್ ಸಂಸ್ಥೆಯ ಕೇಂದ್ರ ಘಟಕದಿಂದ ಅಂದಾಜು 50 ಲಕ್ಷ ರೂ.ಗಳ ವೆಚ್ಚದ ಎರಡು ನೂರು ಕುಟುಮಬ ಟೆಂಟುಗಳನ್ನು ಕೂಡಾ ವಿತರಿಸಲಾಗಿದೆ. ಜಮಖಂಡಿ ಮತ್ತು ಬಾದಾಮಿ ತಾಲೂಕಿನಲ್ಲಿ 48 ಲೈಪ್ ಜಾಕೆಟ್ಗಳನ್ನು ವಿತರಿಸಿ ಒಂದು ಬೋಟನ್ನು ಕೂಡಾ ರಕ್ಷಣಾ ಕಾರ್ಯಾ ಚರಣೆಯಲ್ಲಿ ಉಪಯೋಗಿಸಲಾಗಿತ್ತು. ಇವೆಲ್ಲದಕ್ಕೂ ಸಂಸ್ಥೆಯ ಕಾರ್ಯಕರ್ತರು ಹಾಗೂ ಯುವ ರೆಡ್ ಕ್ರಾಸ್ ಪಡೆ ಅತ್ಯಂತ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿದ್ದಾರೆ.
ಮಂಗಳೂರಿನ ಮಣಿಪಾಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿಯ 40ವಿದ್ಯಾರ್ಥಿ ಗಳು ಪ್ರವಾಸಕ್ಕೆ ಬಂದಾಗ ಪ್ರವಾಹದಲ್ಲಿ ಸಿಲುಕಿದ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಮಂಗಳೂರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಇವೆಲ್ಲವನ್ನು ಗಮನಿಸಿ ರೆಡ್ ಕ್ರಾಸ್ ಸಂಸ್ಥಯ ರಾಜ್ಯ ಘಟಕ ಬಾಗಲಕೋಟೆ ಜಿಲ್ಲಾ ಘಟಕ ಬಾಗಲಕೋಟೆ ಜಿಲ್ಲಾ ಘಟಕವನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿತ್ತು.