ಔರಾದ್ಕರ್ ವರದಿ ಜಾರಿಯಲ್ಲಿನ ನ್ಯೂನತೆ ಸರಿಪಡಿಸಿ: ಎಂ.ಬಿ.ಪಾಟೀಲ್

ಬೆಂಗಳೂರು, ನ. 6:    ಔರಾದ್ಕರ್ ವರದಿ ಜಾರಿಯಾಗಿದ್ದು, ವರದಿ ಜಾರಿಯಲ್ಲಿ ಸರ್ಕಾರ ಷರತ್ತು ಹಾಕಿರುವುದು ಸರಿಯಲ್ಲ. ಈಗಿರುವ ಹಾಗೂ ಮುಂದೆ ಬರುವ ಎಲ್ಲಾ ಪೊಲೀಸರಿಗೂ ವೇತನ ಪರಿಷ್ಕರಣೆ ಸಮಾನವಾಗಬೇಕು ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ ಕಷ್ಟಪಟ್ಟು ಕೆಲಸ ಮಾಡುವವರಿಗೆ ಅನುಕೂಲ ಆಗಬೇಕು ಎನ್ನುವ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಔರಾದ್ಕರ್  ವರದಿಯನ್ನು ಜಾರಿಗೆ ತಂದಿತ್ತು. ಆದರೆ ಬಿಜೆಪಿ ಸರ್ಕಾರ ಮುಂದೆ ಬರುವ ಪೊಲೀಸರಿಗೆ ಮಾತ್ರ ವೇತನ ಪರಿಷ್ಕರಣೆ ಮಾಡಿದ್ದು, ಹಾಲಿ ಕೆಲಸ ಮಾಡುತ್ತಿರುವವರಿಗೆ ಎಫ್.ಡಿ.ಷರತ್ತು ಹಾಕಿದೆ. ಮೊದಲ ಗ್ರೇಡ್ ಮಾತ್ರ ನೀಡಿದ್ದು 30 ಸಾವಿರ ಸಂಬಳಮೇಲ್ಪಟ್ಟವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರದಿ ಎಲ್ಲರಿಗೂ ಏಕರೂಪವಾಗಿ ಜಾರಿಯಾಗಬೇಕು. ಈಗಿರುವ ಪೊಲೀಸರಿಗೆ ಹಾಗೂ ಮುಂದೆ ಬರುವವರಿಗೆ ಅನ್ವಯವಾಗಬೇಕು.ಆದರೆ ಸರ್ಕಾರ ಎಫ್ ಡಿ ಷರತ್ತು ಹಾಕಿದೆ. ಇದು ಸರಿಯಲ್ಲ. ಷರತ್ತು ತೆಗೆದುಹಾಕಬೇಕು. ಇದು ರಾಜ್ಯದ ಪೊಲೀಸರ ಬೇಡಿಕೆಯಾಗಿದ್ದು, ಈ ಸಂಬಧ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರ ಜೊತೆ ಚರ್ಚಿಸುವುದಾಗಿ ಎಂ.ಬಿ.ಪಾಟೀಲ್ ತಿಳಿಸಿದರು. ಜೆಡಿಎಸ್ ನಾಯಕರು ಬಿಜೆಪಿ ಬಗ್ಗೆ ಮೃಧುಧೋರಣೆ  ತೋರುತ್ತಿರುವುದು ಏಕೆ ಎಂದು ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡ ಅವರನ್ನೇ ಕೇಳಬೇಕು. ಜೆಡಿಎಸ್ ನ ಜಾತ್ಯತೀತ ನಿಲುವು ಏಕೆ ಬದಲಾಗಿದೆ ಎಂದು ಪ್ರಶ್ನಿಸಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.