ಮಂಗಳೂರಿನ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಮಂಗಳೂರು, ಡಿ.  19:      ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು  ನಡೆಯುತ್ತಿದ್ದು ಮಂಗಳೂರಿನಲ್ಲಿ ಗುರುವಾರ ಪ್ರತಿಭಟನೆಗಳು ತೀವ್ರ ಸ್ವರೂಪ  ಪಡೆದುಕೊಂಡಿವೆ. ಹಲವೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಪರಿಸ್ಥಿತಿ ಕೈಮೀರಿ ಹೋಗುವ  ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ  ಹೇರಲಾಗಿದೆ. 

ಇಲ್ಲಿನ ಬಂದರು, ಪಾಂಡೇಶ್ವರ, ಬರ್ಕ್, ಹಂಪನಕಟ್ಟೆ ಮತ್ತು ಕದ್ರಿ  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿಯವರೆಗೂ ಕರ್ಪ್ಯೂ ಘೋಷಿಸಲಾಗಿದೆ.  ಈ ಅವಧಿಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಸೂಚನೆ ಹೊರಡಿಸಲಾಗಿದೆ. 

ಮಂಗಳೂರಿನಲ್ಲಿ  ಈಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ರಿಕ್ತಗೊಂಡ ಪ್ರತಿಭಟನಕಾರರು ಪೊಲೀಸರ  ಮೇಲೆ ಕಲ್ಲು, ಬಾಟಲಿಗಳ ತೂರಾಟ ಮಾಡಿದ್ಧಾರೆ. ಅನೇಕ ವಾಹನ ಮತ್ತು ಕಟ್ಟಡಗಳಿಗೆ ಬೆಂಕಿ  ಹಚ್ಚಿದ್ದಾರೆ. ಮಂಗಳೂರಿನ ಬಂದರು ಪ್ರದೇಶವಂತೂ ಅಕ್ಷರಶಃ ರಣರಂಗವಾಗಿದೆ.  ಪ್ರತಿಭಟನಕಾರರ ದಾಳಿಯಲ್ಲಿ 20 ಪೊಲೀಸರು ಗಾಯಗೊಂಡಿದ್ಧಾರೆ. ಉದ್ರಿಕ್ತ ಗುಂಪುಗಳನ್ನು  ಚದುರಿಸಲು ಪೊಲೀಸರ ಬಳಿ ಆಶ್ರುವಾಯು ಕೊರತೆ ಇದ್ದ ಹಿನ್ನೆಲೆಯಲ್ಲಿ ಓಪನ್ ಫೈರಿಂಗ್  ನಡೆದಿದೆ ಎಂಬ ಮಾಹಿತಿ ಇದೆ.

ಇದೇ ವೇಳೆ, ಪ್ರತಿಭಟನಕಾರರು ಹಿಂಸಾಚಾರಕ್ಕೆ  ಇಳಿಯಬಾರದು, ಶಾಂತಿಯುತವಾಗಿ ವರ್ತಿಸಬೇಕು ಎಂದು ಮುಸ್ಲಿಮ್ ಧರ್ಮಗುರುಗಳು ಕರೆ  ನೀಡಿದ್ದಾರೆ. ಮಸೀದಿಯ ಮೈಕ್ಗಳ ಮೂಲಕ ಶಾಂತಿ ಸಂದೇಶ ರವಾನಿಸಿದ ಧರ್ಮಗುರುಗಳು, ಕಲ್ಲು  ತೂರಾಟ ನಡೆಸದಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ಧಾರೆ.