ಚೊಚ್ಚಲ ಅಥವಾ ಗಂಡಾಂತರ ಗರ್ಭಿಣಿಯರು ನಿರಂತರ ತಪಾಸಣೆ ಮಾಡಿಸಬೇಕು: ಡಾ.ಯಲ್ಲಾ ರಮೇಶಬಾಬು
ಬಳ್ಳಾರಿ 18: ಚೊಚ್ಚಲ ಅಥವಾ ಗಂಡಾಂತರ ಗರ್ಭಿಣಿಯರು ಹತ್ತಿರದ ಸರಕಾರಿ ಆಸ್ಪತ್ರೆಗಳಲ್ಲಿ ನಿರಂತರ ತಪಾಸಣೆ ಮಾಡಿಸಬೇಕು ಹಾಗೂ ತಪ್ಪದೇ ತಾಯಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಹೇಳಿದರು.
ಬಳ್ಳಾರಿ ತಾಲ್ಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿ ಗ್ರಾಮದಲ್ಲಿಯ ಗರ್ಭೀಣಿಯರ ಆರೋಗ್ಯ ವಿಚಾರಿಸಿ ಅವರ ಪಾಲಕರೊಂದಿಗೆ ಮಾತನಾಡಿದರು.ಮನೆಯಲ್ಲಿ ಮಗಳಾಗಲಿ ಅಥವಾ ಸೊಸೆಯಾಗಲಿ ಗರ್ಭಿಣಿಯೆಂದು ತಿಳಿದ ದಿನದಿಂದಲೇ ನಿರಂತರವಾಗಿ ವೈದ್ಯರಿಂದ ಮಾಡಿಸಬೇಕಾದ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡುವ ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರು ವೈಯಕ್ತಿಕ ಕೆಲಸಗಳ ಕಾರಣದಿಂದ ತಡ ಮಾಡಬಾರದು. ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ವೈದ್ಯರ ಸೂಚನೆಯಂತೆ ಅವರ ನಿರಂತರ ನಿಗಾವಣೆ, ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡುಬರುವ ವ್ಯತ್ಯಾಸ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಶೀಲಿಸಿ ಅಗತ್ಯವೆನಿಸಿದಲ್ಲಿ ತಜ್ಞ ವೈದ್ಯರ ಬಳಿ ತಕ್ಷಣವೇ ತೆರಳಬೇಕು ಎಂದರು.ರಕ್ತಹೀನತೆ ಕಂಡುಬಂದಲ್ಲಿ ಸ್ಥಳೀಯವಾಗಿ (ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್, ರಕ್ತ ಹಾಕಿಸುವಿಕೆ) ನೀಡುವ ಚಿಕಿತ್ಸೆಯಿಂದ ಸುಧಾರಣೆ ಹೊಂದಬಹುದು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ್ ಕುರಿತು ಆರೋಗ್ಯ ಶಿಕ್ಷಣ ಹೊಂದಬೇಕು ಮರೆಯಬಾರದು.ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸ್ಸು ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು. ಹೆರಿಗೆ ವಿಷಯವನ್ನು ಆದ್ಯತೆಯಾಗಿಟ್ಟುಕೊಂಡು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಂಡು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಆರೈಕೆ ಕುರಿತು ನಿಗಾವಹಿಸಲು ಕ್ರಮವಹಿಸಿ ಎಂದು ತಿಳಿಸಿದರು.ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಹಬ್ಬ, ಜಾತ್ರೆ, ಊರ ದೇವರ ಪ್ರಜೆ ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರು ಮೊದಲು ಆದ್ಯತೆ ನೀಡಬೇಕು. ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿ ವಾರ ಚರ್ಚಿಸಬೇಕು ಎಂದು ಹೇಳಿದರು.ಧಾರ್ಮಿಕ ಸ್ಥಳಗಳಿಗೆ ಗರ್ಭಿಣಿಯರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪದೇ-ಪದೇ ಭೇಟಿ ನೀಡುತ್ತಿದ್ದರೆ ಅಂತ ಧಾರ್ಮಿಕ ಕೇಂದ್ರಗಳ ಸ್ವಾಮೀಜಿಯರನ್ನು ಭೇಟಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸುವಂತೆ ವಿನಂತಿಸಬೇಕು. ಆಕಸ್ಮಿಕ ಘಟನೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಯಾರು ಇಲ್ಲದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು ಎಂದು ತಿಳಿಸಿದರು.ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆರಿಗೆಗೆ ಗರ್ಭಿಣಿ ಬಂದಾಗ ಅಗತ್ಯ ಪರೀಕ್ಷೆ ಮೂಲಕ ಹೆರಿಗೆ ನಿರ್ವಹಿಲು ಸಾಧ್ಯತೆಯಾಗಬೇಕು. ಇಲ್ಲದಿದ್ದಲ್ಲಿ ಗಂಭೀರತೆ ಕಂಡುಬಂದರೆ ತಡ ಮಾಡದೇ ಸಿಬ್ಬಂದಿ ಸಹಿತ ಶಿಫಾರಸ್ಸಿಗೆ ಮರೆಯಬಾರದು ಎಂದರು.ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಕಾವ್ಯಶ್ರೀ, ಡಿಎನ್‌ಓ ಗೀರೀಶ್, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಚಂದ್ರಕಲಾ, ಸಮುದಾಯ ಆರೋಗ್ಯಾಧಿಕಾರಿ ಮೊನಿಕಾ, ಪ್ರಾಥಮಿಕ ಸುರಕ್ಷಾಧಿಕಾರಿ ನಾಗಮ್ಮ, ಆಶಾ ಕಾರ್ಯಕರ್ತೆಯರಾದ ಸಿದ್ದಮ್ಮ, ರೇಣುಕಾ, ಕಸ್ತೂರಿ ಸೇರಿದಂತೆ ತಾಯಂದಿರು ಹಾಗೂ ಗ್ರಾಮಸ್ಥರುಉಪಸ್ಥಿತರಿದ್ದರು.