ಉತ್ತಮ ರಸ್ತೆ ಸಾರಿಗೆಗೆ ಮೊದಲ ಆದ್ಯತೆ: ಶಾಸಕ ರಾಮಣ್ಣ ಲಮಾಣಿ

ಲೋಕದರ್ಶನ ವರದಿ

ಶಿರಹಟ್ಟಿ 07: ಮತಕ್ಷೇತ್ರದದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಶಹರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆ, ವಿದ್ಯುತ್, ನೀರು ಸೇರಿದಂತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಹಾಗೂ ಉತ್ತಮ ರಸ್ತೆ ಸಾರಿಗೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಅವರು ತಾಲೂಕಿನ ಶಿರಹಟ್ಟಿ ಪಟ್ಟಣದ ಹೊರಗಡೆ ಸೊರಟೂರು ಬೈಪಾಸ್ ಸೇತುವೆಯ ರಸ್ತೆಯಲ್ಲಿ ಸುಮಾರು 75 ಲಕ್ಷ ರೂಗಳಲ್ಲಿ ಕೂಡು ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಪಟ್ಟಣದ ಹೊರರಸ್ತೆ ಕಾಮಗಾರಿಯು ಬಹುದಿನದ ಬೇಡಿಕೆಯಾಗಿತ್ತು, ಉತ್ತಮ ರಸ್ತೆಯ ಕಾಮಗಾರಿಯ ಕನಸು ನನಸಾಗುವ ಕಾಲ ಬಂದಿದೆ. ಪ್ರಸ್ತುತ ರಸ್ತೆಯು ಬಾಗಲಕೋಟೆ, ಶಿರಹಟ್ಟಿ ಬಿಳಿಗಿರಿರಂಗನಬೆಟ್ಟ ರಾಷ್ಟ್ರೀಯ ಹೆದ್ದಾರಿ 57 ನ್ನು ಹೊಂದಿದ್ದು, ಹಲವಾರು ಗಂಟೆಗಳ ಪ್ರಯಾಣ ಹಾಗೂ ಅಂತರ ಕಡಿಮೆಯಾಗಲಿದೆ ಹಾಗೂ ಈ ಪಟ್ಟಣಗಳ ನಡುವಿನ ಜನರಿಗೆ ಉತ್ತಮ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಡಂಬಳ, ತಾ.ಪಂ ಮಾಹಿ ಸದಸ್ಯ ಜಾನು ಲಮಾಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಫಕ್ಕೀರೇಶ ರಟ್ಟೀಹಳ್ಳಿ, ಪರಶುರಾಮ ಡೊಂಕಬಳ್ಳಿ, ಶ್ರೀನಿವಾಸ ಮಾನೆ, ಅಬ್ದುಗನಿ ಬೇವಿನಗಿಡದ, ಅಕ್ಬರ ಯಾದಗೀರಿ, ಶ್ರೀನಿವಾರ ಬಾರಬಾರ, ಲಕ್ಷ್ಮಣ ಲಮಾಣಿ, ಎಂ ಡಿ ಬಟ್ಟೂರ ಮುಂತಾದವರು ಉಪಸ್ಥಿತರಿದ್ದರು.