ಮಾರ್ಚ್‌ 1 ರಿಂದ 20ರ ವರೆಗೆ ಮೊದಲ ಹಂತದ ದ್ವಿತೀಯ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ನಲಿನ್ ಅತುಲ್‌

First Phase II PUC Exam from March 1 to 20: District Collector Nalin Atul

ಮಾರ್ಚ್‌ 1 ರಿಂದ 20ರ ವರೆಗೆ ಮೊದಲ ಹಂತದ ದ್ವಿತೀಯ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ನಲಿನ್ ಅತುಲ್‌

ಕೊಪ್ಪಳ 27 : ಮೊದಲ ಹಂತದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್‌ 1 ರಿಂದ ಮಾ.20 ರವರೆಗೆ ನಡೆಯಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು. 

ಅವರು ಇತ್ತೀಚೆಗೆ ತಮ್ಮ ಕಛೇರಿಯಲ್ಲಿ ನಡೆದ ದ್ವಿತೀಯ ಪಿಯುಸಿ ಮೊದಲ ಹಂತದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಕೊಪ್ಪಳ ಜಿಲ್ಲೆಯ ಒಟ್ಟು 24 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಒಟ್ಟು 16,256 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪರೀಕ್ಷಾ ಕೇಂದ್ರಗಳ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಆವರಣವನ್ನು ನಿಬಂರ್ಧಿತ ಪ್ರದೇಶ ಎಂದು ಘೋಷಿಸುವುದು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತಲು ಜೆರಾಕ್ಸ್‌ ಮತ್ತು ಕಂಪ್ಯೂಟರ್ ಸೈಬರ್ ಅಂಗಡಿಗಳನ್ನು ಮುಚ್ಚುವುದು ಸೂಕ್ತವೆಂದು ಮನಗಂಡು ಸಿ.ಆರ್‌.ಪಿ.ಸಿ ಕಾಯ್ದೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆಯನ್ನ ಜಾರಿಗೊಳಿಸಲಾಗಿದೆ ಎಂದರು. 

ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳ ಸಾಗಾಣಿಕೆಗಾಗಿ ತ್ರೀಸದಸ್ಯ ಸಮಿತಿ ರಚಿಸಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಸುವ ಹಿತದೃಷ್ಠಿಯಿಂದ ಒಟ್ಟು 24 ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿನ ದೃಶ್ಯಗಳನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಿಸಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೇಂದ್ರ ಕಛೇರಿಯಿಂದ ಪ್ರತಿ ಪರಿಕ್ಷಾ ಕೇಂದ್ರಕ್ಕೆ ಒಬ್ಬ ಪ್ರಶ್ನೆ ಪತ್ರಿಕೆ ಪಾಲಕ ಹಾಗೂ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ ಉಪಕರಣಗಳಾದ ಕೈ ಗಡಿಯಾರ, ಮೊಬೈಲ್ ಮುಂತಾದವುಗಳನ್ನು ತರುವದನ್ನು ನಿಷೇಧಿಸಲಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುತೀನ ಚೀಟಿಯನ್ನು ತರಬೇಕು. ಎಲ್ಲಾ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನಿರಂತರ ವಿದ್ಯುತ್ ಸಂಪರ್ಕವನ್ನು ಒದಗಿಸಲು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಸ್ತುತ ಸಾಲಿನ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಮುಂಜಾಗ್ರತವಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರಗಳ ತಾಲ್ಲೂಕವಾರು ವಿವರ: ಕೊಪ್ಪಳ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 4925 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಗಂಗಾವತಿ ತಾಲ್ಲೂಕಿನಲ್ಲಿ 9 ಪರೀಕ್ಷಾ ಕೇಂದ್ರಗಳಲ್ಲಿ 5416 ವಿದ್ಯಾರ್ಥಿಗಳು, ಕುಷ್ಟಗಿ ತಾಲ್ಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳಲ್ಲಿ 2388 ವಿದ್ಯಾರ್ಥಿಗಳು, ಯಲಬುರ್ಗಾ ತಾಲ್ಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ 1046 ವಿದ್ಯಾರ್ಥಿಗಳು, ಕುಕನುರು ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರದಲ್ಲಿ 1026 ವಿದ್ಯಾರ್ಥಿಗಳು, ಕಾರಟಗಿ ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರದಲ್ಲಿ 757 ವಿದ್ಯಾರ್ಥಿಗಳು, ಕನಕಗಿರಿ ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರದಲ್ಲಿ 698 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. 

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಸೇರಿದಂತೆ ಜಿಲ್ಲಾ ಖಜಾನೆ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ತಾಲ್ಲೂಕುಗಳ ತಹಶಿಲ್ದಾರರು, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಹಾಗೂ ಎಲ್ಲಾ ಪರೀಕಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.