ರಾಯಬಾಗ ತಾಲೂಕು ಮಟ್ಟದ ಪ್ರಥಮ ಕದಳಿ ಮಹಿಳಾ ಸಮಾವೇಶ
ಹಾರೂಗೇರಿ 09: ಮಹಿಳೆಯರ ಪರ ಧ್ವನಿಯಾಗಿರುವ, ಶಿವಶರಣೆಯರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಮಹಿಳಾ ಸಮಾನತೆಗಾಗಿ ಹೋರಾಡುವ ಛಾತಿಯುಳ್ಳ ಡಾ.ರತ್ನಾ ಬಾಳಪ್ಪನವರ ಅವರು ಸಮಾವೇಶದ ಸರ್ವಾಧ್ಯಕ್ಷೆಯಾಗಿರುವುದರಿಂದ ಸಮಾವೇಶದ ಘನತೆ ಹೆಚ್ಚಿದೆ ಎಂದು ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವ ಬ್ಯಾಕೂಡ ರಸ್ತೆಯ ನಿಶ್ಚಿಂತ ನೆಲೆಯಲ್ಲಿ ರವಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಮಹಿಳಾ ಕದಳಿ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ಹಾಗೂ ರಾಯಬಾಗ ತಾಲೂಕು ಮಹಿಳಾ ಕದಳಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ರಾಯಬಾಗ ತಾಲೂಕು ಮಟ್ಟದ ಪ್ರಥಮ ಕದಳಿ ಮಹಿಳಾ ಸಮಾವೇಶದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಪುಣ್ಯದ ಕೆನೆಯಾಗಿಸುವ ಹಾರೂಗೇರಿಯಲ್ಲಿ ಪ್ರೀತಿ, ಸಂಸ್ಕೃತಿ, ಧರ್ಮ, ಸಾಹಿತ್ಯ, ಉದಾರತೆ ಹೆಪ್ಪುಗಟ್ಟಿದ್ದು, ಈ ಭಾಗದ ಮಹಿಳೆಯರ ಸಭಲೀಕರಣಕ್ಕಾಗಿ ಈ ಸಮಾವೇಶ ಪೂರಕವಾಗಿದೆ ಎಂದರು.
ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಉಪನ್ಯಾಸ ನೀಡುತ್ತ ಮಹಿಳೆಯರು ಅವಕಾಶಕ್ಕಾಗಿ ಅಂಗಲಾಚುವುದಕ್ಕಿಂತ ಅವಕಾಶಗಳನ್ನು ಬಳಸಿಕೊಳ್ಳಲು ಮುಂಗಾಗಬೇಕು. ಅವಕಾಶಗಳು ಕೇಳಿದರೆ ಸಿಗುವುದಿಲ್ಲ. ಸಮಾನತೆಯ ಅವಕಾಶಗಳನ್ನು ಸೃಷ್ಠಿಸಿಕೊಳ್ಳಬೇಕು. ಅವಕಾಶಗಳಿಗಾಗಿ ಸಂಘರ್ಷಕ್ಕಿಳಿದರೂ ಚಿಂತೆಯಿಲ್ಲ ತಮ್ಮ ಸಾಮರ್ಥ್ಯ ಹಾಗೂ ಆತ್ಮ ವಿಶ್ವಾಸದ ಮೇಲೆ ಸಾಮಾಜಿಕ ಸಮಾನತೆ ಸಾಧಿಸಬೇಕು. ಮಹಿಳೆ ಇಂದು ಕಾನೂನು, ಸಮಾಜ, ಸರ್ಕಾರದ ನೆರವು ಪಡೆದುಕೊಂಡು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತಿದ್ದಾಳೆ. ಮಹಿಳಾ ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸಮಾಜದಲ್ಲಿ ಸಂರಕ್ಷಣೆಯೊಂದಿಗೆ ಗೌರವಯುತವಾಗಿ ಬದುಕಬೇಕಾಗಿದೆ ಎಂದು ಹೇಳಿದರು.
ಬೆಳಿಗ್ಗೆ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ ಅವರ ಸಾನಿಧ್ಯದಲ್ಲಿ ಧ್ವಜಾರೋಹನ ನೇರವೇರಸಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ ಬಸವಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಿವೃತ್ತ ಸೇನಾಧಿಕಾರಿ ಮಹಾದೇವ ಜಾಧವ ರಾಷ್ಟ್ರ ಧ್ವಜಾರೋಹನ ಹಾಗೂ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಷಟ್‌ಸ್ಥಲ ಧ್ವಜಾರೋಹನ, ಶರಣ ಸಾಹಿತ್ಯ ಪರಿಷತ್ತಿನ ಅಶೋಕ ಮಳಗಲಿ ಪರಿಷತ್ ಧ್ವಜಾರೋಹನ, ಕದಳಿ ವೇದಿಕೆ ತಾಲೂಕಾಧ್ಯಕ್ಷೆ ಅನುಸೂಯಾ ಮುಳವಾಡ ನಾಡ ಧ್ವಜಾರೋಹನ ನೇರವೇರಿದರು.
ನಂತರ ಪಟ್ಟಣದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪುರಸಭೆ ಅಧ್ಯಕ್ಷ ವಸಂತ ಲಾಳಿ ಹಾಗೂ ಉಪಾಧ್ಯಕ್ಷ ಬಸವರಾಜ ಅರಕೇರಿ ವಚನ ಗ್ರಂಥ ಮೆರವಣಿಗೆಗೆ ಚಾಲನೆ ನೀಡಿದರು. ಶಿವಶರಣ ವಾಹನದಲ್ಲಿ ಸರ್ವಾಧ್ಯಕ್ಷೆ ಡಾ.ರತ್ನಾ ಬಾಳಪ್ಪನವರ, ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರನ್ನು ಕೂಡ್ರಿಸಿ, ನೂರಾರು ಶಿವಶರಣೆಯರು ತಲೆ ಮೇಲೆ ವಚನ ಗ್ರಂಥಗಳನ್ನು ಹೊತ್ತು ಸಕಲ ವಾದ್ಯಗಳೊಂದಿಗೆ ಶ್ರೀ ಹನುಮಾನ ನಗರದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತ ನಿಶ್ಚಿಂತನೆಲೆಯವರೆಗೆ ಭವ್ಯ ವಚನ ಗ್ರಂಥಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.
ಸಿಪಿಐ ರವಿಚಂದ್ರನ ಡಿ.ಬಿ ವಚನವನ್ನು ಪಠಿಸಿದರು. ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ, ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಸಂಚಾಲಕರಾದ ಎಸ್.ಎಲ್.ಬಾಡಗಿ, ಮುಖ್ಯಾಧಿಕಾರಿ ಅಭಿಷೇಕ ಪಾಂಡೆ, ತಾಲೂಕು ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ ಮೊದಲಾದ ಗಣ್ಯರು, ಶರಣೆಯರು ಉಪಸ್ಥಿತರಿದ್ದರು.