ಬೆಂಗಳೂರು, ಡಿ 25, ನಗರದ
ಕಮ್ಯೂನಿಸ್ಟ್ ಪಕ್ಷದ ಕಚೇರಿ ಎದುರು ನಿಲ್ಲಿಸಿದ ಬೈಕ್ ಗಳಿಗೆ ಬೆಂಕಿ ಹಚ್ಚಿ, ಕಿಡಿಗೇಡಿಗಳು ಪರಾರಿಯಾಗಿರುವ
ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ನಾಲ್ಕು
ಜನರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ಬಾಟಲಿಯೊಂದರಲ್ಲಿ
ಪೆಟ್ರೋಲ್ ತುಂಬಿಕೊಂಡು ಬಂದಿದ್ದರು. ಕಚೇರಿ ಎದುರು ನಿಲ್ಲಿಸಿದ್ದ ಬೈಕ್ ಹಾಗೂ ಕೆಂಪು ಬಣ್ಣದ ಗೇಟ್
ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾರೆ ಎನ್ನಲಾಗಿದೆ.ಕಿಡಿಗೇಡಿಗಳು ಒಟ್ಟು 6 ಬೈಕ್ ಗಳಿಗೆ
ಬೆಂಕಿ ಹಚ್ಚಿದ್ದಾರೆ. ಭದ್ರತಾ ಸಿಬ್ಬಂದಿ ಅಲ್ಲೇ ವಾಸವಾಗಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ಬೆಂಕಿ
ನಂದಿಸುವ ಕೆಲಸ ಮಾಡಿ, ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬೈಕ್‌ಗಳು ಅಲ್ಪಸ್ವಲ್ಪ ಸುಟ್ಟು
ಹೋಗಿವೆ. ಆದರೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವೈಯಾಲಿಕಾವಲ್
ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಯಾರು,
ಯಾವ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದರ ಕುರಿತು ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ
ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ ತಿಳಿಸಿದ್ದಾರೆ.ಡಿವೈಎಫ್‌ಐ ಕಾರ್ಯಕಾರ್ತರು,
ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರನ್ನು ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಿದ
ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.