ಯೋಜನೆ ಜನರಿಗೆ ತಲುಪಿಸಲು ಅಧಿಕಾರಿಗಳು ಆಸಕ್ತಿ ವಹಿಸಿ
ಯೋಜನೆ ಜನರಿಗೆ ತಲುಪಿಸಲು ಅಧಿಕಾರಿಗಳು ಆಸಕ್ತಿ ವಹಿಸಿ
ತಾಳಿಕೋಟಿ 16 : ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರವು ಬುಡಕಟ್ಟು ಜನಾಂಗದ ಏಳಿಗೆಗಾಗಿ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಈ ಯೋಜನೆ ಯಶಸ್ವಿಯಾಗಬೇಕಾದರೆ ಇದಕ್ಕೆ ಅಧಿಕಾರಿಗಳ ಆಸಕ್ತಿ ಅಗತ್ಯವಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು. ಶುಕ್ರವಾರ ಪಟ್ಟಣದ ಶ್ರೀ ಎಚ್.ಎಸ್.ಪಾಟೀಲ ಸಭಾ ಭವನದಲ್ಲಿ ಭಗವಾನ್ ಬಿರ್ಸಾಮುಂಡ ಅವರ 150ನೇ ಜಯಂತಿ ವರ್ಷದ ಅಂಗವಾಗಿ ತಾಪಂ ವತಿಯಿಂದ ಹಮ್ಮಿಕೊಂಡ ಜನ ಜಾತೀಯ ದಿವಸ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನ 18 ಗ್ರಾಮಗಳಿಗೆ ಅನ್ವಯಿಸುವ ಈ ಯೋಜನೆಯಲ್ಲಿ 12 ಗ್ರಾಮಗಳು ನನ್ನ ಮತಕ್ಷೇತ್ರಕ್ಕೆ ಬರುತ್ತವೆ ಆದರೆ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು ವ್ಯವಸ್ಥಿತವಾಗಿ ಕೆಲಸ ಮಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಧಿಕಾರಿಗಳು ಕೇವಲ ಸರ್ಕಾರದ ಆದೇಶ ಪಾಲಿಸುವವರಾಗಬಾರದು, ಅದರ ಯಶಸ್ವಿಗಾಗಿ ಆಸಕ್ತಿಯಿಂದ ಕೆಲಸ ಮಾಡಬೇಕು ಈ ಯೋಜನೆ ಅನುಷ್ಠಾನಕ್ಕೆ 17 ಇಲಾಖೆಗಳ ಅಧಿಕಾರಿಗಳು ಬರುತ್ತಾರೆ ಇಲ್ಲಿ ಹೆಚ್ಚಿನವರು ಇಲ್ಲ ಇದಕ್ಕಾಗಿ ನಾನು ಪ್ರತ್ಯೇಕವಾಗಿ ಇವರ ಒಂದು ಸಭೆ ಕರೆಯುತ್ತೇನೆ ಯೋಜನೆ ಅನುಷ್ಠಾನಕ್ಕಾಗಿ ಆಸಕ್ತಿವಹಿಸಿ ಕೆಲಸ ಮಾಡುವ ಅಗತ್ಯ ಇದೆ, ಇಲ್ಲಿ ಬುಡಕಟ್ಟು ಜನಾಂಗ ಇಲ್ಲ ಪರಿಶಿಷ್ಟ ಪಂಗಡದ ಸಮಾಜವು ಇದರ ವ್ಯಾಪ್ತಿಗೆ ಬರುವುದರಿಂದ ಇವರ ಕಲ್ಯಾಣಕ್ಕಾಗಿರುವ ಯೋಜನೆಗಳು ಅನುಷ್ಠಾನವನ್ನು ಮಾಡಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.ತಾಪಂ ಇಒ ನಿಂಗಪ್ಪ ಮಸಳಿ ಮಾತನಾಡಿ ಕೇಂದ್ರ ಸರ್ಕಾರದ ಈ ಯೋಜನೆಯ ಅಭಿಯಾನದ ಕಾರ್ಯಕ್ರಮಗಳು ಎಲ್ಲಾ ಗ್ರಾಪಂ ಮಟ್ಟದಲ್ಲೂ ಇಂದು ಏಕಕಾಲದಲ್ಲಿ ನಡೆಯುತ್ತಿವೆ, ಪರಿಶಿಷ್ಟ ಪಂಗಡದ ಸಮಾಜದ ಕಲ್ಯಾಣಕ್ಕಾಗಿ ಗ್ರಾಪಂ ಹಾಗೂ ತಾಪಂ ಗಳಲ್ಲಿ ಹಲವಾರು ಯೋಜನೆಗಳ ಅನುದಾನಗಳಿವೆ 15ನೇ ಹಣಕಾಸು ಅನುದಾನದಲ್ಲೂ ಕೆಂಗಡಕ್ಕಾಗಿ ಯೋಜನೆಗಳಿವೆ, ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದರು. ಅನುಷ್ಠಾನದ 17 ಇಲಾಖೆಗಳ ಪೈಕಿ ಸಭೆಯಲ್ಲಿ ಉಪಸ್ಥಿರಿದ್ದ ಆರೋಗ್ಯ, ಶಿಕ್ಷಣ, ಕೃಷಿ, ಪಶು ಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸಮಾಜ ಕಲ್ಯಾಣ ಇಲಾಖೆಯ ತಾಲೂಕ ಸಹಾಯಕ ನಿರ್ದೇಶಕಿ ಬಿ.ಜಿ. ಮಠ ಪ್ರಸ್ತಾವಿಕವಾಗಿ ಮಾತನಾಡಿ ಯೋಜನೆಯ ವಿವರಣೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಮಹರ್ಷಿ ವಾಲ್ಮೀಕಿ,ಡಾ.ಬಿ.ಆರ್. ಅಂಬೇಡ್ಕರ್,ಬಾಬು ಜಗಜೀವನ ರಾಮ್ ಹಾಗೂ ಬಿರ್ಸಾಮುಂಡಾ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಿರಸ್ತೆದಾರ ಜೆ.ಆರ್.ಜೈನಾಪೂರ,ಟಿ.ಎಚ್.ಒ.ಡಾ. ಸತೀಶ ತಿವಾರಿ,ಕೃಷಿ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ಪಶು ಸಂಗೋಪನ ಇಲಾಖೆಯ ರಾಠೋಡ,ಸಿ.ಆರಿ್ಸ. ಎಸ್. ಎಮ್.ಪಾಲ್ಕಿ,ಸ.ಕ.ಇ.ಕಚೇರಿ ಅಧಿಕಾರಿ ಶಿವಲಿಂಗ ಹಡಚದ,ಎಇಇ ಹಿರೇಗೌಡರ, ಕಾರ್ಯದರ್ಶಿ ಸಚೀನ ಪಾಟೀಲ, ಮಡು ಸಾಹುಕಾರ, ವಾಲ್ಮೀಕಿ ಸಮಾಜದ ಮುಖಂಡರಾದ ಲಕ್ಷ್ಮಣ ಕೊಡೆಕಲ್, ಕುಮಾರ ಅಸ್ಕಿ, ಕಾಶಿನಾಥ ಪಾಟೀಲ,ವಿವಿಧ ಇಲಾಖೆಗಳ ಅಧಿಕಾರಿಗಳು,ತಾಪಂ. ತಾಲೂಕ ಆಡಳಿತದ ಸಿಬ್ಬಂದಿಗಳು ಇದ್ದರು. ಶಿಕ್ಷಕ ಬಿ.ಐ.ಹಿರೆಹೋಳಿ ನಿರೂಪಿಸಿದರು. ನಿಲಯ ಪಾಲಕ ಎನ್.ವಿ.ಕೋರಿ ವಂದಿಸಿದರು.