ನಿಂಧನೆ: ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಗೆ ದಂಡ

ಜೋಹಾನ್ಸ್‌ಬರ್ಗ್, ಜ 10              ದಕ್ಷಿಣ ಆಫ್ರಿಕಾ ಆಟಗಾರನ ಮೇಲೆ ಅವಾಚ್ಯ ಪದ ಬಳಕೆ ಮಾಡಿರುವ ಇಂಗ್ಲೆಂಡ್‌ನ ವಿಕೆಟ್ ಕೀಪರ್ ಜೋಸ್ ಬಟ್ಲರ್ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಂದ್ಯದ ಶುಲ್ಕದ ಶೇ.15 ರಷ್ಟು ದಂಡ ವಿಧಿಸಿದೆ ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ದ ದ್ವಿತೀಯ ಟೆಸ್ಟ್ ಪಂದ್ಯದ ಅಂತಿಮ ದಿನದ ವೇಳೆ ಈ ಘಟನೆ ನಡೆದಿತ್ತು. ಈ ಸರಣಿಯ ಬಳಿಕ ನಿವೃತ್ತಿ ಸಲ್ಲಿಸುತ್ತಿರುವ ಚಾಂಪಿಯನ್ ಆಟಗಾರ ವೆರ್ನಾನ್ ಪಿಲಾಂಡರ್ ವಿರುದ್ಧ ಜೋಸ್ ಬಟ್ಲರ್ ಅವಾಚ್ಯ ಪದ ಪ್ರಯೋಗ ಮಾಡಿದ್ದರು.ಅಂತಿಮ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಪಂದ್ಯ ಡ್ರಾ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು. ಈ ವೇಳೆ ತೀವ್ರ ಹತಾಶರಾದ ಇಂಗ್ಲಿಷ್ ಆಟಗಾರರು ಹರಿಣಗಳ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ಹರಸಾಹಸ ಪಡುತ್ತಿದ್ದರು. ಅಲ್ಲದೆ ಅವಾಚ್ಯ ಪದ ಬಳಕೆಯೊಂದಿಗೆ ನಿಂದನೆ ಮಾಡಲು ಪ್ರಾರಂಭಿಸಿದರು.ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತ್ತು.  ಪಂದ್ಯ ಅಂತ್ಯಗೊಳ್ಳಲು ಇನ್ನು 20 ಓವರ್‌ಗಳಷ್ಟೇ ಬಾಕಿ ಉಳಿದಿತ್ತು. ಈ ವೇಳೆ ಕ್ರೀಸಿನಲ್ಲಿ ನೆಲೆಯೂರಿ ನಿಂತಿದ್ದ  ವೆರ್ನಾನ್ ಪಿಲಾಂಡರ್ ವಿರುದ್ಧ ಆಂಗ್ಲ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿದರು.29ರ ಹರೆಯದ ಜೋಸ್ ಬಟ್ಲರ್ ಮೇಲೆ ಒಂದು ಡಿಮೆರಿಟ್ ಪಾಯಿಂಟ್ ಸಹ ವಿಧಿಸಲಾಗಿದೆ. ಎರಡು ವರ್ಷದೊಳಗೆ ನಾಲ್ಕು ಡಿಮೆರಿಟ್ ಪಾಯಿಂಟ್ ಪಡೆದರೆ ನಿಷೇಧ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಐಸಿಸಿ ಮ್ಯಾಚ್ ರೆಫರಿ ಕೈಗೊಂಡಿರುವ ಶಿಸ್ತು ಕ್ರಮವನ್ನು ಬಟ್ಲರ್ ಒಪ್ಪಿಕೊಂಡಿದ್ದಾರೆ.