ನಗರದಲ್ಲಿ ಫೆ. 26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಅನಂತನಾಗ್ ಚಿತ್ರಗಳ ಪುನರಾವಲೋಕನ

ಬೆಂಗಳೂರು, ಫೆ 6 :     ರಾಜ್ಯ ಸರ್ಕಾರ ಹಾಗೂ ಚಲನಚಿತ್ರ ಅಕಾಡೆಮಿ ವತಿಯಿಂದ ನಗರದಲ್ಲಿ ಫೆ. 26ರಿಂದ ಮಾ. 4ರವರೆಗೆ 12ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ ಹಮ್ಮಿಕೊಳ್ಳಲಾಗಿದೆ. ಚಿತ್ರೋತ್ಸವದಲ್ಲಿ ವಿಶ್ವದ 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. 

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್,  ಫೆ. 26ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ಸಮಾರಂಭ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಅವರು ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. 

ನಗರದ ರಾಜಾಜಿನಗರದ ಒರಾಯನ್ ಮಾಲ್ ಪಿವಿಆರ್ ಸಿನಿಮಾದ 11 ಪರದೆಗಳು, ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟದಲ್ಲಿನ ರಾಜ್ ಭವನ, ಸುಚಿತ್ರ ಚಿತ್ರ ಮಂದಿರಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು. 

ಪ್ರಸಕ್ತ ಚಿತ್ರೋತ್ಸವದ ಭಾರತದ ಬಹು ಭಾಷಾ ಕಲಾವಿದರ ವಿಭಾಗದಲ್ಲಿ ಕನ್ನಡದ ಹಿರಿಯ ನಟ ಅನಂತನಾಗ್ ಅವರ ಚಿತ್ರಗಳ ಪುನರಾವಲೋಕನ ಏರ್ಪಡಿಸಲಾಗಿದೆ. ಜೊತೆಗೆ, ರಷ್ಯಾದ ಹೆಸರಾಂತ ನಿರ್ದೇಶಕ, ಸಿನಿಶಾಸ್ತ್ರಜ್ಞ ಆಂದ್ರೆ ತಾರ್ಕೋವ್ ಸ್ಕಿ  ಅವರ ಚಿತ್ರಗಳನ್ನು ಕೂಡ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು. 

ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಚಿತ್ರಗಳ ಪೈಕಿ, ಏಷ್ಯಾ ಚಿತ್ರಗಳು, ಭಾರತೀಯ ಚಿತ್ರಗಳು, ಕನ್ನಡ ಚಿತ್ರಗಳು ಹಾಗೂ ಕನ್ನಡ ಜನಪ್ರಿಯ ಚಿತ್ರಗಳ ಸ್ಪರ್ಧೆ ನಡೆಯಲಿದೆ. ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ ವಿಷಯಾಧಾರಿತ ವಿಭಾಗದಲ್ಲಿ ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ತಾನಸೇನ್, ಮೀರಾ ಸೇರಿದಮತೆ ಹಲವು ಸಂಗೀತ ಪ್ರದಾನ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು. 

ಭಾರತದ ಉಪಭಾಷೆಗಳಾದ ತುಳು, ಬಂಜಾರ, ಕೊಡವ, ಕೊಂಕಣಿ, ಪನಿಯ(ಕೇರಳ), ಇರುಳ (ತಮಿಳುನಾಡು), ಖಾಸಿ, ಪಂಗ್ಚನ್ಪಾ (ಅಸ್ಸಾಂ) ಭಾಷೆಗಳ ಚಿತ್ರಗಳನ್ನು ಕೂಡ ಚಿತ್ರರಸಿಕರು ವೀಕ್ಷಿಸಬಹುದಾಗಿದೆ. ಜೊತೆಗೆ, ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ  ಪ್ರಶಸ್ತಿ ಹಾಗೂ ಚಲನಚಿತ್ರ ಪ್ರಚಾರ ಜಾಲ ಪ್ರಶಸ್ತಿ ವಿಜೇತ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು. 

ಆತ್ಮಕತೆ- ವ್ಯಕ್ತಿಚಿತ್ರಗಳ ವಿಭಾಗದಲ್ಲಿ ಕನ್ನಡದ ಕಾದಂಬರಿಕಾರಿ ಎಸ್.ಎಲ್ ಭೈರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಫಾಲ್ಕೆ ಪ್ರಶಸ್ತಿ ಪುರಸ್ಕೃತಿ ವಿ.ಕೆ.ಮೂರ್ತಿ, ರಷ್ಯಾದ ನಿರ್ದೇಶಕ ಆಂದ್ರೆ ತಾರ್ಕೋವ್, ರಷ್ಯಾ ಚಿತ್ರ ಕಲಾವಿದ ಆಂದ್ರೆರು ಬ್ಲೇವ, ಚಿಂತಕ ಸಂಗೀತ ತಜ್ಞ ರಾಜೀವ್ ತಾರಾನಾಥ್ಅವರ ವ್ಯಕ್ತಿ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು. 

ಜೊತೆಗೆ, ಏಳು ದಿನಗಳ ಚಿತ್ರೋತ್ಸವದಲ್ಲಿ ವೆಬ್ ಸೀರೀಸ್ ರಚನೆ ಮತ್ತು ಸಂಚಿಕೆಗಳ ನಿರ್ವಹಣೆ, ಚಿತ್ರ ನಿರ್ಮಾಣ; ಉದ್ಯಮಶೀಲ ವಿಧಾನ, ಚಿತ್ರ ನಿರ್ಮಾಪಕರಿಗೆ ಕಾನೂನು ನೆರವು: ವಿತರಣೆ, ಪೈರೆಸಿ ತಡೆ ಮತ್ತು ಕೃತಿ ಸ್ವಾಮ್ಯ ರಕ್ಷಣೆ, ಸೆನ್ಸಾರ್ ಮತ್ತು ಪ್ರಾದೇಶಿಕ ಭಾವನೆಗಳು- ನ್ಯಾಯವಾದಿಗಳು ಮತ್ತು ಕಾನೂನು ತಜ್ಞರ ಜೊತೆ ಚರ್ಚೆ, ಕೃತಕ ಬುದ್ಧಿಮತ್ತೆ, ಸ್ವತಂತ್ರ ಚಿತ್ರ ನಿರ್ಮಾಣದ ಕೊನೆಯೇ? ಗ್ರೀನ್ ಚಿತ್ರ ನಿರ್ಮಾಣ, ಅಂತರರಾಷ್ಟ್ರೀಯ ಸಹ ನಿರ್ಮಾಣ; ನಿರ್ಮಾಪಕರ ಯಶೋಪಥಗಳ ಕುರಿತು ವಿಶೇಷ ಚರ್ಚೆ, ಕಾರ್ಯಾಗಾರಗಳು ನಡೆಯಲಿವೆ ಎಂದರು. 

ಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾ, ಇಂಡೋನೇಷಿಯಾ, ತಜಕಿಸ್ತಾನ, ಇಟಲಿ, ಇಸ್ರೇಲ್, ಆಸ್ಟ್ರಿಯಾ, ರಷ್ಯಾ, ಪಿಲಿಪೀನ್ಸ್, ಸಿಂಗಾಪುರ, ಹಾಂಗ್ ಕಾಂಗ್, ಇಂಡೋನೇಷಿಯಾ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ನಿರ್ಮಾಪಕರು, ನಿರ್ದೇಶಕರು ವಿದೇಶಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. 

ಬೆಂಗಳೂರು ಇತಿಹಾಸಕಾರ ಸುರೇಶ್ ಮೂನ ಅವರಿಂದ 'ಬೆಂಗಳೂರು ಚಿತ್ರಮಂದಿರಗಳ ಬದಲಾಗುತ್ತಿರುವ ಭೂ ವಿನ್ಯಾಸ',  ಮಹಿಳಾ ಸಾಹಿತಿ ಮತ್ತು ಪತ್ರಕರ್ತರ ಬಳಗ ಹಿತೈಷಿಣಿ ಆಯೋಜಿಸಿರುವ 'ಲಿಂಗ ಸಂವೇದನೆ' ಕುರಿತು ಸಂವಾದ ಸೇರಿದಂತೆ 125 ಚಿತ್ರಗಳ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು. 

ಆನ್ ಲೈನ್ ಮೂಲಕ ಮಾತ್ರ ಟಿಕೆಟ್ :

ಪ್ರಸಕ್ತ ಚಲನಚಿತ್ರೋತ್ಸವಕ್ಕೆ ಆಸಕ್ತರು ಕೇವಲ ಆನ್ ಲೈನ್ ಮೂಲಕ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರಿಗೆ 800 ರೂ., ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಕಲಾವಿದರು, ಹಿರಿಯ ನಾಗರಿಕರಿಗೆ 400 ರೂ. ದರ ನಿಗದಿಪಡಿಸಲಾಗಿದೆ. ಆಸಕ್ತರು,bookmyshow.com ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಫೆ. 22ರ ನಂತರ ನಂದಿನಿ ಬಡಾವಣೆಯಲ್ಲಿರುವ ಚಲನಚಿತ್ರ ಅಕಾಡೆಮಿ ಕಾರ್ಯಾಲಯ, ಇನ್ ಫೆಂಟ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಟಿಕೆಟ್ ಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸುವಾಗಲೇ ಟಿಕೆಟ್ ಪಡೆಯುವ ಸ್ಥಳವನ್ನು ನಮೂದಿಸಬೇಕು. ವಿವರಗಳಿಗೆ - ದೂ. ಸಂ- 02261445050, ಇಮೇಲ್- support@bookmyshow.com