ಬೆಂಗಳೂರು, ಫೆ.8, ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಡವದಲ್ಲಿ ಅತ್ಯುತ್ತಮ ಸಿನೆಮಾಗಳು ಪ್ರದರ್ಶನಗೊಳ್ಳುತ್ತವೆ. ಆದರೆ ಚಿತ್ರೋತ್ಸವ ತಂಡದಲ್ಲಿರುವ ಪೂರ್ವಾಗ್ರಹ ಮನಸ್ಥಿತಿಯಿಂದಾಗಿ ಇಂಥ ಸಿನೆಮಾಗಳಿಗೂ ಪ್ರೇಕ್ಷಕರ ಕೊರತೆ ಕಾಡುತ್ತಿದೆ.ಬೆಂಗಳೂರು ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರತಿವರ್ಷವೂ ಕನ್ನಡದ ಮತ್ತು ಇತರ ಭಾರತೀಯ ಭಾಷೆಗಳ ಸಿನೆಮಾಗಳು ಸಾಮಾನ್ಯವಾಗಿ ಪ್ರೇಕ್ಷಕರ ಕೊರತೆ ಎದುರಿಸಲು ಇದೇ ಪ್ರವೃತ್ತಿ ಕಾರಣವಾಗಿದೆ. ಇದು ನಿಜವಾಗಿಯೂ ಇಂಥ ಸಿನೆಮಾಗಳಿಗೆ, ಇವುಗಳ ಚಿತ್ರತಂಡದವರಿಗೆ ಮತ್ತು ಸಿನೆಪ್ರಿಯರಿಗೆ ಮಾಡುವ ಅನ್ಯಾಯವೆಂದೇ ಈ ಬಗ್ಗೆ ತಿಳಿದಿರುವರು ಆರೋಪಿಸುತ್ತಾರೆ.
ಪ್ರಾದೇಶಿಕ ಭಾಷೆಯ ಉತ್ತಮ ಚಿತ್ರಗಳು ಜನರ ಗಮನ ಸೆಳೆಯದಿರುವಂತೆ ಮಾಡುತ್ತಿರುವವರು ಚಿತ್ರೋತ್ಸವ ತಂಡದಲ್ಲಿ ಇರುವವರೇ ಮಾಡುತ್ತಿದ್ದಾರೆ ಎಂಬುದು ಆಘಾತಕಾರಿ. ಇವರಿಂದಾಗಿ ಭಾರತೀಯ ಭಾಷೆಯ ಚಿತ್ರಗಳಿಗಷ್ಟೇ ಅಲ್ಲದೇ ಏಶಿಯನ್ ಭಾಷೆಯ ಉತ್ತಮ ಸಿನೆಮಾಗಳು ಚಿತ್ರರಸಿಕರ ಕೊರತೆ ಎದುರಿಸುತ್ತಿವೆ.ಚಿತ್ರೋತ್ಸವ ಶುರುವಾಗುವ ಒಂದೆರಡು ದಿನಗಳಲ್ಲಿಯೇ ಈ ಪೂರ್ವಾಗ್ರಹಪೀಡಿತ ಮನಸ್ಥಿತಿ ಕೆಲಸ ಮಾಡಲು ಆರಂಭಿಸುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ರೆಡ್, ಗ್ರೀನ್ ಬ್ಲೂ ಮಾರ್ಕ್ ಹಾಕಿದ ಸಿನೆಮಾಗಳ ಪಟ್ಟಿ/ಪೋಸ್ಟರ್‌ಗಳನ್ನು ಪೋಸ್ಟ್ ಮಾಡಲು ಆರಂಭವಾಗುತ್ತದೆ. ರೆಡ್ ಇದ್ದರೆ ನೊದಲನೆ ಅತ್ಯುತ್ತಮ ಚಿತ್ರ, ಗ್ರೀನ್ ಇದ್ದರೆ ಎರಡನೇ ಅತ್ಯುತ್ತಮ ಚಿತ್ರ, ಬ್ಲೂ ಇದ್ದರೆ ಮೂರನೇ ಅತ್ಯುತ್ತಮ ಚಿತ್ರ. ಚಿತ್ರೋತ್ಸವ ನಡೆಯುವ ಅಷ್ಟು ದಿನವೂ ಮಾರನೇ ದಿನ ಇಂಥ ಚಿತ್ರಗಳನ್ನೇ ನೋಡಿ ಎಂದು ಕಲರ್ ಮಾರ್ಕ್ ಮಾಡಿ ಹೇಳುವ ಪೋಸ್ಟ್ ಗಳು ವೈರಲ್ ಆಗುತ್ತವೆ. ಮರುದಿನ ಇಂಥ ಸಿನೆಮಾಗಳಿಗೆ ಜನಜಂಗುಳಿ ಇರುತ್ತದೆ.
ಹೀಗೆ ಶಿಫಾರಸು ಮಾಡುವವರು ಭಾರತೀಯ ಭಾಷೆಗಳ ಮತ್ತು ಇತರ ಏಶಿಯನ್ ಭಾಷೆಗಳ ಸಿನೆಮಾಗಳನ್ಯಾಕೆ ನೋಡಿ ಎಂದು ಹೇಳುವುದಿಲ್ಲ ಎಂದು ಇಂಥ ಪ್ರವೃತ್ತಿಯನ್ನು ಗಮನಿಸಿದವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಲ್ಲದೇ ಇದು ಈ ಭಾಷೆಗಳ ಚಿತ್ರತಂಡಗಳವರಿಗೆ ಮಾಡುವ ಅವಮಾನ. ಇವರು ಕೀಳಿರಿಮೆಯಿಂದ ಬಳಲುವ ಸ್ಥಿತಿ ತಂದಿಡುತ್ತಿದ್ದಾರೆ ಎನ್ನುತ್ತಾರೆ. ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ವ್ಯಕ್ತಿ ಬೆಂಗಳೂರು ಚಿತ್ರೋತ್ಸವ ತಂಡದಲ್ಲಿದ್ದಾರೆ ಜತೆಗೆ ಸುಚಿತ್ರಾ ಫಿಲ್ಮ್ ಸೊಸೈಟಿಯೊಂದಿಗೆ ನೆಂಟು ಹೊಂದಿದ್ದಾರೆಂಬ ಆಘಾತಕಾರಿ ಅಂಶವನ್ನು ಹೇಳುತ್ತಾರೆ. ಇದರಿಂದಾಗಿಯೇ ಇವರ ಶಿಫಾರಸುಗಳು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಪಡೆಯುತ್ತವೆ. ಆದ್ದರಿಂದ ಚಿತ್ರೋತ್ಸವ ತಂಡದಲ್ಲಿರುವ ಹಿರಿಯರು ಈ ವ್ಯಕ್ತಿಯ ಪ್ರವೃತ್ತಿಯ ಮೇಲೆ ಕಡಿವಾಣ ಹಾಕದಿದ್ದರೆ ಪ್ರಾದೇಶಿಕ ಭಾಷೆಗಳ ಉತ್ತಮ ಚಲನಚಿತ್ರಗಳಿಗೆ ಅನ್ಯಾಯವಾಗುವುದು ಮುಂದುವರಿಯುತ್ತದೆ.