ಮುತ್ತೈದೆಯರಿಗೆ ಉಡಿ ತುಂಬುವುದು ಪುಣ್ಯದ ಕಾರ್ಯ: ಜೀಡಗಾ ಪೂಜ್ಯರು

ಮುತ್ತೈದೆಯರಿಗೆ ಉಡಿ ತುಂಬುವುದು ಪುಣ್ಯದ ಕಾರ್ಯ: ಜೀಡಗಾ ಪೂಜ್ಯರು  Filling the laps of married women is a meritorious act: Jeedaga Seer


ಇಂಡಿ 09 : ಸುಕ್ಷೇತ್ರ ಲಚ್ಯಾಣದ   ಸಿದ್ಧಲಿಂಗ ಮಹಾರಾಜರ ಮಠದ ಆವರಣದಲ್ಲಿ ಸದ್ಗುರು   ಸಿದ್ಧಲಿಂಗ ಮಹಾರಾಜರ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ, ಧರ್ಮಸಭೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.  ಮುಗಳಖೇಡದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.  ಮುತ್ತೈದೆಯರಿಗೆ ಉಡಿ ತುಂಬುವುದು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾದ ಗೌರವ ಹಾಗೂ ಸೇವೆಯಾಗಿದೆ. ಇಂತಹ ಧಾರ್ಮಿಕ ಆಚರಣೆಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಉಡಿ ತುಂಬುವುದು ಜಗನ್ಮಾತೆ ಮಹಾಲಕ್ಷ್ಮಿ ಅಥವಾ ಪಾರ್ವತಿ ದೇವಿಯನ್ನು ಪೂಜಿಸಿದಂತೆ.

ಅಕ್ಕಿ, ತಾಂಬೂಲ, ಅರಿಶಿನ-ಕುಂಕುಮ, ಹಣ್ಣು ಹಾಗೂ ಸೀರೆಯನ್ನು ನೀಡುವ ಮೂಲಕ ದೇವಿಯ ಆಶೀರ್ವಾದ ಪಡೆಯಲಾಗುತ್ತದೆ. ಇದರಿಂದ ಕುಟುಂಬದಲ್ಲಿ ಧನ-ಧಾನ್ಯ, ಸೌಭಾಗ್ಯ, ಶಾಂತಿ ಹಾಗೂ ನೆಮ್ಮದಿ ವೃದ್ಧಿಯಾಗುತ್ತದೆ ಎಂದು ಹೇಳಿದರು. ಶಾಸ್ತ್ರಗಳ ಪ್ರಕಾರ ಮುತ್ತೈದೆಯರಿಗೆ ಉಡಿ ತುಂಬುವುದು ಶ್ರೇಷ್ಠವಾದ ದಾನಗಳಲ್ಲಿ ಒಂದಾಗಿದೆ. ನಿಸ್ವಾರ್ಥ ಮನಸ್ಸಿನಿಂದ ಗೌರವ ಹಾಗೂ ಮಂಗಳದ್ರವ್ಯಗಳನ್ನು ನೀಡುವುದರಿಂದ ಸತ್ಕರ್ಮದ ಪುಣ್ಯ ಲಭಿಸುತ್ತದೆ. ಮುತ್ತೈದೆತನವನ್ನು ಗೌರವಿಸುವ ಈ ಆಚರಣೆಯಿಂದ ಕುಟುಂಬದ ಕ್ಷೇಮ ಮತ್ತು ಸೌಭಾಗ್ಯ ವೃದ್ಧಿಯಾಗುತ್ತದೆ. ಲಚ್ಯಾಣ ಮಠವು ಮುಗಳಖೇಡ ಹಾಗೂ ಜೀಡಗಾ ಮಠಗಳಂತೆ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು. 

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವಾನ್ವಿತ ಸ್ಥಾನವಿದೆ. ವೇದಕಾಲದಿಂದ ಇಂದಿನ ಆಧುನಿಕ ಯುಗದವರೆಗೆ ಭಾರತೀಯ ನಾರಿಯರ ಪಾತ್ರ ಮತ್ತು ಕೊಡುಗೆ ಅಪಾರವಾಗಿದೆ. ಬಂಥನಾಳದ ಉತ್ತರಾಧಿಕಾರಿ ಆಯ್ಕೆ ಭಕ್ತರು ಹಾಗೂ ಮುಗಳಖೇಡದ ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ನಡೆಯಬೇಕು. ಅದಕ್ಕೆ ತಾವು ಬದ್ಧರಾಗಿರುವುದಾಗಿ ಹೇಳಿದರು. 

ಕಾರ್ಯಕ್ರಮದಲ್ಲಿ ಶಿವಾನಂದ ಮಹಾಸ್ವಾಮಿಗಳು, ಕುಷ್ಟಗಿ ಮಹಾಂತ ಮಹಾಸ್ವಾಮಿಗಳು, ಅಭಿನವ ಸಿದ್ಧಲಿಂಗ ಪೂಜ್ಯರು, ಶಿರಶ್ಯಾಡದ ಮುರುಘೇಂದ್ರ ಶ್ರೀಗಳು, ಅಭಿನವ ಬಸವ ಮೃತ್ಯುಂಜಯ ಪೂಜ್ಯರು, ಮರುಳಸಿದ್ದೇಶ್ವರ ಪೂಜ್ಯರು, ಮಾತೋಶ್ರೀ ಸುಗಲಾಂಬ, ಬಸಯ್ಯ ಸ್ವಾಮಿಗಳು, ರೈತ ಹೋರಾಟಗಾರ ಶಶಿಕಾಂತ ಗೂರಜಿ, ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗರತ್ನ ಮನಗೂಳಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.