2ಎ ಮೀಸಲಾತಿಗೆ ಕಾನೂನು ಮೂಲಕ ಹೋರಾಟ

ಚಿಕ್ಕೋಡಿ,05: ಪಂಚಮಸಾಲಿ ಲಿಂಗಾಯತ್ ಸಮಾಜಕ್ಕೆ 2ಎ ಮೀಸಲಾತಿಗೆ ಕಾನೂನು ಮೂಲಕ ಹೋರಾಟ ನಡೆಸಲು ಪಂಚಮಸಾಲಿ ಲಿಂಗಾಯತ್ ಹೋರಾಟ ಸಮಿತಿ ನಿರ್ಧರಿಸಿದೆ. ಹೀಗಾಗಿ ಬರುವ ಸೆ.22 ರಂದು ಬೆಳಗಾವಿಯಲ್ಲಿ ಬೃಹತ್ ಪಂಚಮಸಾಲಿ ಲಿಂಗಾಯತ್ ವಕೀಲರ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಜಗದ್ಗುರು ಬಸವಜಯ ಮೃತುಂಜ್ಯಯ ಸ್ವಾಮೀಜಿ ಹೇಳಿದರು. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಪಂಚಮಸಾಲಿ ಲಿಂಗಾಯತ್ ವಕೀಲರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಅವರು ತಿಳಿಸಿದರು. ರಾಜ್ಯದ ದೊಡ್ಡ ಸಮಾಜವಾದ ಲಿಂಗಾಯತ್ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ರಾಜ್ಯಾಧ್ಯಂತ ಬೃಹತ್ ಹೋರಾಟ ಮಾಡಿದ ಬಳಿಕ ಬಿಜೆಪಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದನೆ ನೀಡಿದಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂಧಿಸುತ್ತಿಲ್ಲ, ಅಧಿಕಾರ ಇರದೇ ಇದ್ದಾಗ ಘರ್ಜಿಸುವ ರಾಜಕಾರಣಿಗಳು ಅಧಿಕಾರ ಬಂದ ಮೇಲೆ ಯಾಕೆ ಮೌನ ವಹಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ, ಅಧಿಕಾರ ಇಲ್ಲದೆ ಇದ್ದಾಗ ಹೋರಾಟಕ್ಕೆ ಬಲ ಕೊಡತ್ತೀರಾ ಅಧಿಕಾರ ಇದ್ದಾಗಲು ಬಲ ಕೊಡಬೇಕೆಂದು ನಮ್ಮ ಆಗ್ರಹವಾಗಿದೆ ಎಂದರು. 

ರಾಜ್ಯದಲ್ಲಿ 20 ಜನ ಲಿಂಗಾಯತ್ ಪಂಚಮಸಾಲಿ ಸಮಾಜಕ್ಕೆ ಸೇರಿದ ಶಾಸಕರು ಇದ್ದಾರೆ. ಅಧೀವೇಶನದಲ್ಲಿ ಮೀಸಲಾತಿ ಕುರಿತು ಪ್ರಸ್ತಾಪ ಮಾಡಬೇಕೆಂದು ಹೇಳಿದಾಗ ಸ್ಪೀಕರ ಅವಕಾಶ ಮಾಡಿಕೊಡಲಿಲ್ಲ ಎನ್ನುವರು ನೇರವಾಗಿ ಮುಖ್ಯಮಂತ್ರಿ ಜೊತೆ ಯಾಕೆ ಮಾತುಕತೆ ನಡೆಸಲಿಲ್ಲ, ಅಧಿಕಾರ ಶಾಶ್ವತವಲ್ಲ ಸಮಾಜ ಶಾಶ್ವತ ಎಂಬುದನ್ನು ಅರಿತು ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು. 

ಕಾನೂನು ಮೂಲಕ ಒತ್ತಡ ಹಾಕಲು ಇಡೀ ಉತ್ತರ ಕರ್ನಾಟಕದ ವಕೀರಲ ಬೃಹತ್ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದಲ್ಲಿ ಪಂಚಮಸಾಲಿ ಸಮಾಜದ ಕಾನೂನು ಪಂಡಿತರ ಜೊತೆ ಸಮಾಲೋಚಿಸಿ ಮೀಸಲಾತಿ ಹೇಗೆ ಪಡೆಯಬೇಕೆಂದು ಹೋರಾಟದ ರೂಪುರೇಷದ ಕುರಿತು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಸೆ.22 ರಂದು ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಬೆಳಗಾವಿಗೆ ಆಗಮೀಸಬೇಕೆಂದು ಸ್ವಾಮೀಜಿ ಕರೆ ನೀಡಿದರು. 

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎಂ.ಆರ್‌.ಸಗರೆ, ಎಂ.ಐ.ಬೆಂಡವಾಡೆ, ಅಶೋಕ ಹರಗಾಪೂರೆ, ಸುಧಾಕರ ಖಾಡ, ವಿರೂಪಾಕ್ಷಿ ಈಟಿ ಮುಂತಾದವರು ಇದ್ದರು.