ಇಂಫಾಲ್, ಡಿ.8 : ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ)ಯನ್ನು ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ನಿರ್ಧರಿಸಿರುವುದನ್ನು ವಿರೋಧಿಸಿ ಮಣಿಪುರದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಕಾಂಗ್ರೆಸ್, ಎಡಪಕ್ಷಗಳು, ಎಂಪಿಪಿ ಮತ್ತು ಇತರ ರಾಜಕೀಯ ಪಕ್ಷಗಳು ಮಸೂದೆಯನ್ನು ತಿರಸ್ಕರಿಸಿವೆ. ಸಿಎಬಿಯನ್ನು ವಿರೋಧಿಸಿ ಮಣಿಪುರ ಪೀಪಲ್ಸ್ ಅಗೈನ್ಸ್ಟ್ ಸಿಟಿಜನ್ಶಿಪ್ ಬಿಲ್ (ಎಂಎಎನ್ಪಿಎಸಿ) ಸಂಘಟನೆಯು ಇಂದಿನಿಂದ ಮೂರು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದೆ. ಸಂಘಟನೆಯ ಸಂಚಾಲಕ ಯಮ್ನಮ್ಜ ದಿಲೀಪ್ಕುಮಾರ್ ಮಾತನಾಡಿ, ಪ್ರತಿಭಟನೆ ಮುಂದುವರಿಯಲಿದೆ. ಜನರು ಬೀದಿಗಿಳಿದು ಸಿಎಬಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಎಲ್ಲಾ ಚಟುವಟಿಕೆಗಳನ್ನು ಡಿಸೆಂಬರ್ 9 ರ ಮುಂಜಾನೆ 1 ರಿಂದ ಡಿಸೆಂಬರ್ 11 ರಂದು ಮುಂಜಾನೆ 3 ರವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದರು. ಎಎಂಎಸ್ಯು ಅಧ್ಯಕ್ಷ ಲೈಶ್ರಾಮ್ ಅಥೌಬಾ, ನೆಸೊ ಕರೆ ನೀಡಿರುವ ಮುಷ್ಕರವನ್ನು ಎಎಂಎಸ್ಯು ಬೆಂಬಲಿಸುತ್ತದ. ಡಿಸೆಂಬರ್ 10 ರಂದು ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು. ಈ ದಿನ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನವಾಗಿದ್ದು, ಈ ದಿನಾಚರಣೆಗೆ ಯಾವುದೇ ಅಚರಣೆ ಇಲ್ಲ ಎಂದು ಹೇಳಿದೆ. ಡಿಸೆಂಬರ್ 9 ರಂದು ಸಂಸತ್ನಲ್ಲಿ ಮಂಡನೆಯಾಗಲಿರುವ ಪೌರತ್ವ ತಿದ್ದುಪಡಿ ಮಸೂದೆ 2019 ಅನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಪಕ್ಷ ಇಂದು ಪ್ರಕಟಿಸಿದೆ. ಅಸಂವಿಧಾನಿಕ ಮತ್ತು ಜಾತ್ಯತೀತ ವಿರೋಧಿ ಮಸೂದೆಯನ್ನು ಕಾಂಗ್ರೆಸ್ ಕಳೆದ ಸಂಸತ್ತಿನ ಅಧಿವೇಶನದಲ್ಲಿ ವಿರೋಧಿಸಿತ್ತು. ಈಶಾನ್ಯ ಭಾರತದ ಮೂಲನಿವಾಸಿಗಳಿಗೆ ಸಂಕಷ್ಟವನ್ನುಂಟು ಮಾಡುವ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್ ವಕ್ತಾರ ನಿಂಗೊಂಬಮ್ ಬುಪೆಂಡಾ ಮೀಟೈ, ಸಿಎಬಿ 2019 ಅನ್ನು ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ವಿರೋಧಿಸುತ್ತದೆ ಮತ್ತು ಈ ಹೋರಾಟದೊಂದಿಗೆ ನಿಸ್ಸಂದಿಗ್ಧವಾಗಿ ನಿಲ್ಲುತ್ತದೆ ಎಂದು ಹೇಳಿದೆ. ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪೌರತ್ವ ತಿದ್ದುಪಡಿ ಮಸೂದೆ 2019 ಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.