ನವದೆಹಲಿ, ಜ 29 : ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ದೆಹಲಿಗಾಗಿ ಕಳೆದ ಐದು ವರ್ಷಗಳಿಂದ ಹಗಲೂ ರಾತ್ರಿ ದುಡಿದಿದ್ದೇನೆ. ದೆಹಲಿಯ ಜನರಿಗಾಗಿ ಪ್ರತಿಯೊಂದನ್ನೂ ತ್ಯಾಗ ಮಾಡಿದ್ದೇನೆ. ರಾಜಕೀಯ ಸೇರಿದ ಮೇಲೆ ಜನರ ಜೀವನವನ್ನು ಸುಧಾರಿಸಲು ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಅದಕ್ಕೆ ಪ್ರತಿಯಾಗಿ ಇಂದು ಬಿಜೆಪಿ ನನ್ನನ್ನು ಉಗ್ರಗಾಮಿ ಎಂದು ಕರೆಯುತ್ತಿದೆ. ಅದು ನೋವುಂಟು ಮಾಡುತ್ತದೆ" ಎಂದಿದ್ದಾರೆ.
ಇದಕ್ಕೂ ಮುನ್ನ ಸಾರ್ವಜನಿಕ ಜಾಥಾದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ, "ದೆಹಲಿಯಲ್ಲಿ ಕೇಜ್ರೀವಾಲ್ ನಂತಹ ಹಲವು ನಟ್ವರ್ ಲಾಲ್ ಮತ್ತು ಉಗ್ರಗಾಮಿಗಳು ಅವಿತಿದ್ದಾಋೆ. ನಾವು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಬೇಕೆ ಇಲ್ಲವೇ ದೆಹಲಿಯಲ್ಲಿ ಕೇಜ್ರೀವಾಲ್ ನಂತಹ ಉಗ್ರಗಾಮಿಯನ್ನು ಎದುರಿಸಬೇಕೆ ಎಂದು ತಿಳಿಯುತ್ತಿಲ್ಲ" ಎಂದಿದ್ದರು.
ವರ್ಮಾ ಅವರ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದುಹಾಕಿದೆ.
ಮಂಗಳವಾರ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದ ವರ್ಮಾ, "ಶಾಹಿನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು 'ಅತ್ಯಾಚಾರಿಗಳು ಮತ್ತು ಕೊಲೆಗಡುಕರು' " ಎಂದಿದ್ದರು.
ವರ್ಮಾ ಜೊತೆಗೆ, ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರನ್ನು ಕೂಡ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಆಯೋಗ ಕೈಬಿಟ್ಟಿದೆ.