ಬೇಸಿಗೆ ಶೇಂಗಾ ಬೆಳೆಯಲ್ಲಿ ಕ್ಷೇತ್ರೋತ್ಸವ ಹಾಗೂ ಶೇಂಗಾ ಬಳ್ಳಿ ಕೀಳುವ ಯಂತ್ರದ ಪ್ರಾತ್ಯಕ್ಷಿಕೆ
ಹುಲಕೋಟಿ 09 : ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ವತಿಯಿಂದ 2024-25ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಅಭಿಯಾನದ ಅಡಿ ಗದಗ ಜಿಲ್ಲೆಯ ನಾಗಾವಿ ಗ್ರಾಮದ ಒಟ್ಟು 125 ರೈತರ ಜಮೀನುಗಳಲ್ಲಿ ಬೇಸಿಗೆ ಶೇಂಗಾ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಡಿ, ಶ್ರೀ ರಾಜೇಸಾಬ ನದಾಫ್ ಇವರ ಜಮೀನಿನಲ್ಲಿ ಬೇಸಿಗೆ ಶೇಂಗಾ ಬೆಳೆಯ ಕ್ಷೇತ್ರೋತ್ಸವ ಹಾಗೂ ಟ್ರ್ಯಾಕ್ಟರ್ ಚಾಲಿತ ಶೇಂಗಾ ಬಳ್ಳಿ ಕೀಳುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ಅಧಿಕಾರಿ ಶ್ರೀಮತಿ ಮೇಘನಾ ನಾಡಿಗೇರ ಇವರು ಬೇಸಿಗೆ ಶೇಂಗಾ ಬೆಳೆಯು ನೀರಾವರಿ ಪ್ರದೇಶದಲ್ಲಿ ಲಾಭದಾಯಕ ಬೆಳೆಯಾಗಿದ್ದು, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಿಂದ ರೈತರು ಅಗತ್ಯ ಮಾಹಿತಿ ಪಡೆದು ಹೆಚ್ಚಿನ ಆದಾಯ ಪಡೆಯಬೇಕೆಂದು ತಿಳಿಸಿದರು. ಜೊತೆಗೆ, ಮುಂಗಾರು ಪೂರ್ವ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಂಡು ಭೂಮಿ ಸಿದ್ಧಪಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ವಿಜ್ಞಾನಿ ಶ್ರೀ ಎಸ್.ಕೆ. ಮುದ್ಲಾಪುರಇವರು ಶೇಂಗಾ ಬೆಳೆಯಲ್ಲಿ ಬರುವ ಪ್ರಮುಖ ಕೀಟ-ರೋಗಗಳು ಹಾಗೂ ಅವುಗಳ ಸಮಗ್ರ ನಿರ್ವಹಣಾ ಕ್ರಮಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಸುಧಾ ವ್ಹಿ. ಮಂಕಣಿ ಇವರು ಗೊಂಚಲು ಮುಂಚೂಣಿ ಪ್ರಾತ್ಯಕ್ಷಿಕೆಯ ಮಹತ್ವದ ಕುರಿತು ರೈತರಿಗೆ ತಿಳಿಸಿದರು ಹಾಗೂ ಬೇಸಿಗೆ ಶೇಂಗಾ ಬೆಳೆಯಲ್ಲಿನ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ರೈತರನ್ನು ಶ್ಲಾಘಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಶ್ರೀ ಎನ್.ಎಚ್.ಭಂಡಿ ಮಾತನಾಡಿ ಬೇಸಿಗೆ ಶೇಂಗಾ ಬೆಳೆಯಲ್ಲಿ ಮಣ್ಣಿನ ಆರೋಗ್ಯದ ಮಹತ್ವ ಹಾಗೂ ಲಘು ಪೋಷಕಾಂಶಗಳ ಉಪಯೋಗದ ಕುರಿತು ವಿವರಿಸಿದರು. ಕೃಷಿ ಇಂಜಿನಿಯರಿಂಗ್ ವಿಜ್ಞಾನಿ, ಡಾ. ವಿನಾಯಕ ನಿರಂಜನ್ ಇವರು ಕೂಲಿಯಾಳುಗಳ ಸಮಸ್ಯೆ ನೀಗಿಸಲು ಹಾಗೂ ಸಾಗುವಳಿ ವೆಚ್ಚವನ್ನು ಕಡಿಮೆ ಮಾಡಲು ಯಾಂತ್ರೀಕರಣ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ನಂತರ ಶ್ರೀ ಮಲ್ಲಪ್ಪ ಫಕೀರ್ಪ ಗೋಲಪ್ಪನವರ ಇವರ ಜಮೀನಿನಲ್ಲಿ ಟ್ರ್ಯಾಕ್ಟರ್ ಚಾಲಿತ ಶೇಂಗಾ ಬಳ್ಳಿ ಕೀಳುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಯಿತು. ನಂತರ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ಕ್ಷೇತ್ರ ಭೆಟ್ಟಿಯನ್ನು ಏರಿ್ಡಸಲಾಯಿತು. ನಾಗಾವಿ ಗ್ರಾಮದ ಪ್ರಗತಿಪರ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.