ಮುಂಗಾರು ಹಂಗಾಮಿಗೆ ರಸಗೊಬ್ಬರ ಪೂರೈಕೆ ಸಮರ​‍್ಕವಾಗಿರಲಿ : ಜಿಲ್ಲಾಧಿಕಾರಿ

ಮುಂಗಾರು ಹಂಗಾಮಿಗೆ ರಸಗೊಬ್ಬರ ಪೂರೈಕೆ ಸಮರ​‍್ಕವಾಗಿರಲಿ : ಜಿಲ್ಲಾಧಿಕಾರಿ Fertilizer supply should be adequate for the monsoon season: District Collector

ಲೋಕದರ್ಶನ ವರದಿ 

ಕಾರವಾರ, 8:- ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರದ  ಪೂರೈಕೆ ಹಾಗೂ ವಿತರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ, ಸಮರ​‍್ಕವಾಗಿರುವಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

 ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ವಿವಿಧ ಗ್ರೇಡ್‌ಗಳ ಒಟ್ಟು 36,560 ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಪ್ರತಿ ತಿಂಗಳೂ ಬೇಡಿಕೆಗೆ ಅಗತ್ಯವಿರುವಷ್ಟು ರಸಗೊಬ್ಬರ ರೈತರಿಗೆ ದೊರೆಯುವ ನಿಟ್ಟಿನಲ್ಲಿ ಅಗತ್ಯ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ರಸಗೊಬ್ಬರ ಪೂರೈಕೆ ಮಾಡುವ ಕಂಪನಿಗಳ ಪ್ರತಿನಿಧಿಗಳು ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಆಗುವಂತೆ ಎಚ್ಚರವಹಿಸಬೇಕು ಎಂದರು.  

 ರೈತರು ತಮ್ಮ ಬೆಳೆಗಳಿಗೆ ಯೂರಿಯಾ ರಸಗೊಬ್ಬರದ ಜೊತೆಗೆ ಇತರೆ ಸಂಯುಕ್ತ ರಸಗೊಬ್ಬರಗಳನ್ನು ಬಳಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಕುರಿತಂತೆ ಜಿಲ್ಲೆಯಾದ್ಯಂತ ರೈತರಿಗೆ ಅರಿವು ಮತ್ತು ತಾಂತ್ರಿಕ ಮಾಹಿತಿಯನ್ನು ತಲುಪಿಸುವಂತೆ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಸಗೊಬ್ಬರ ಜೊತೆಗೆ ಮುಂಗಾರು ಹಂಗಾಮಿಗೆ ಅಗತ್ಯವಿರುವ ಭಿತ್ತನೆ ಬೀಜಗಳ ವಿತರಣೆಯಲ್ಲಿ ಕೂಡಾ ಯಾವುದೇ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು. 

ಪ್ರಸಕ್ತ ಸಾಲಿನಲ್ಲಿ ರೈತರಿಗೆ ಯೂರಿಯಾ ರಸಗೊಬ್ಬರ ಮಾರಾಟ ಮಾಡುವ ಸಂದರ್ಭದಲ್ಲಿ ಪ್ರೂಟ್ಸ್‌ ನೋಂದಣಿ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದ್ದು, ಪ್ರೂಟ್ಸ್‌ ಸಂಖ್ಯೆಯನ್ನು ಪೋರ್ಟಲ್ ನಲ್ಲಿ ಅಳವಡಿಸುವ ಬಗ್ಗೆ ರಸಗೊಬ್ಬರ ಪೂರೈಸುವ ಡೀಲರ್ ಗಳಿಗೆ ಈಗಾಗಲೇ  ತರಬೇತಿ ನೀಡಲಾಗಿದೆ.  ಜಿಲ್ಲೆಯ ರೈತರಿಗೆ ಕೂಡ ಯೂರಿಯಾ ಖರೀದಿ ಸಂದರ್ಭದಲ್ಲಿ ಪ್ರೂಟ್ಸ್‌ ನೋಂದಣಿ ಸಂಖ್ಯೆಯನ್ನು ನೀಡುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್ ತಿಳಿಸಿದರು. 

ಸಭೆಯಲ್ಲಿ  ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸತೀಶ್,  ಜಿಲ್ಲೆಯ ಎಲ್ಲಾ ತಾಲೂಕುಗಳು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ರಸಗೊಬ್ಬರ ಪೂರೈಕೆ ಮಾಡುವ ಕಂಪನಿಗಳ ಪ್ರತಿನಿಧಿಗಳು ಮತ್ತಿತರರು ಇದ್ದರು.