ದೈಹಿಕ ಶಿಕ್ಷಕ ಬಸವರಾಜ ಅನಂತಪುರಗೆ ಸನ್ಮಾನ

ಅನಂತಪುರರ ಒಲವಿನಭಾವ, ವಿಶ್ವಾಸಾರ್ಹತೆ ಗುಣ ವಿಶಿಷ್ಟ- ಪಂಚಾಕ್ಷರಿ ನಂದೀಶ 

ಚಿಕ್ಕಪಡಸಲಗಿ (ತಾ :ಜಮಖಂಡಿ) 29: ಅತ್ಯಂತ ಕ್ರಿಯಾಶೀಲತೆಯ ನಿಷ್ಟೆಯಿಂದ ಸುದೀರ್ಘ 39 ವಸಂತಗಳಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಇದೇ ಜೂನ್ 30 ಕ್ಕೆ ಸೇವಾ ನಿವೃತ್ತಿಗೊಳ್ಳಲಿರುವ ಬಸವರಾಜ ಅನಂತಪುರ ಅವರ ಸೇವಾ ಜೀವನದ ಪಯಣ ಅನುಪಮವಾಗಿದೆ ಎಂದು ಶಿಕ್ಷಣ ಇಲಾಖೆಯ ಜಮಖಂಡಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ (ಪರೀವೀಕ್ಷಕರು) ಪಂಚಾಕ್ಷರಿ ನಂದೀಶ್ ಹೇಳಿದರು.        

ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯಡಿಯಲ್ಲಿ ಚಿಕ್ಕಪಡಸಲಗಿ ಗ್ರಾಮದಲ್ಲಿ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಶುಕ್ರವಾರ ಅವರು ಭೇಟಿ ನೀಡಿ ದೈಹಿಕ ಶಿಕ್ಷಕ ಬಸವರಾಜ ಅನಂತಪುರ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿದರು. ಅನಂತಪುರ ಗುರುಗಳು ಇಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಅಪಾರ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಮಹತ್ವ ಸಾರಿದ್ದಾರೆ. ಕ್ರೀಡೆಗಳ ಅಭಿರುಚಿ ಮಕ್ಕಳಿಗೆ ಮೂಡಿಸಿ ಆರೋಗ್ಯಕರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ವೃತ್ತಿ ಕಾಯಕ ಹಾಗೂ ಪ್ರವೃತ್ತಿಯ ಹವ್ಯಾಸ ವಿಶಿಷ್ಟಕರವಾಗಿದೆ. ಶಾಲೆಯ ಎಲ್ಲ ಮಕ್ಕಳ, ಗುರುಬಳಗ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಈ ಗ್ರಾಮದ ಜನಸಾಮಾನ್ಯರ ಜೊತೆಗೆ ಸಾಮರಸ್ಯದ ಒಡನಾಟ ಹೊಂದಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಎಲ್ಲರನ್ನು ಒಲವಿನಿಂದ ಸ್ನೇಹಪೂರ್ವಕವಾಗಿ ಕಂಡಿದ್ದಾರೆ. ವಿಶ್ವಾಸಾರ್ಹತೆಯಿಂದ ಕಾಣುವ ಮಮತೆಯ ವಿಶೇಷ ಗುಣಸ್ವಭಾವ  ಅವರಲ್ಲಿರುವುದರಿಂದ ಎಲ್ಲರ ಪ್ರೀತಿ ಸಂಪಾದಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಶಾಲಾಭಿವೃಧಿ ಸೇರಿದಂತೆ ಹಲವು ಸಮಾಜಮುಖಿ ಪರದ ಕಾಯಕಗಳು ಅನಂತವಾಗಿ ಅನಂತಪುರ ಗುರುಗಳು ಮಾಡಿ ಮಿನುಗಿದ್ದಾರೆ.ಅವರ ಸರಳತೆಯ ನಡೆ,ನುಡಿಗಳು ಶಿಕ್ಷಕ ಸಮೂಹಕ್ಕೆ ಮಾದರಿಯಾಗಿವೆ. ಆದರಣೀಯ ವ್ಯಕ್ತಿತ್ವದ ಬಸವರಾಜ ಅನಂತಪುರ ಗುರುಗಳ ವಿಶ್ರಾಂತ ಜೀವನ ಚರಿತ್ರೆ ನೆಮ್ಮದಿ, ಆರೋಗ್ಯಕರ ಭಾಗ್ಯಗಿಂದ ಸುಖಕರವಾಗಿ ಸಾಗಲಿ ಎಂದು ಶ್ರೀಮತಿ ಪಂಚಾಕ್ಷರಿ ನಂದೀಶ್ ಶುಭ ಹಾರೈಸಿದರು.           

ಈ ವೇಳೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಮಾತನಾಡಿ, ಅನಂತಪುರ ಅವರ ಸೇವೆ ಎಂದು ಮರೆಯಲಾಗದು. ಶಾಲೆಯ ಆಧಾರಸ್ತಂಭವಾಗಿರುವ ಅವರು ಗೈದಿರುವ ಕೆಲಸ, ಕಾರ್ಯಗಳು ಅನನ್ಯವಾಗಿವೆ. ನಿವೃತರಾದರೂ ಶಾಲೆಗೆ ಅವರ ಸೇವೆ ಇನ್ನೂ ಅಗತ್ಯತೆ ಇದೆ. ದೇವರು ಆರೋಗ್ಯ ಬಲ ಕರುಣಿಸಿ ಕಾಯಕ ಶಕ್ತಿ ಇನ್ನೂ ವೃದ್ಧಿಸಲಿ ಎಂದು ಹರಿಸಿದರು. ಶಿಕ್ಷಕರಾದ ಲೋಹಿತ ಮಿರ್ಜಿ, ಈರಣ್ಣ ದೇಸಾಯಿ, ಗುರುಮಾತೆಯರಾದ ಸಹನಾ ಹತ್ತಳ್ಳಿ, ಕವಿತಾ ಅಂಬಿ, ಪ್ರಮೀಳಾ ತೇಲಸಂಗ ಸೇರಿದಂತೆ ಅಕ್ಷರ ದಾಸೋಹದ ಸಿಬ್ಬಂದಿಗಳು ಇತರರು ಇದ್ದರು.