ವಿಜಯಪುರ 23: ನಗರದ ವಾರ್ಡ್ ನಂ.33 ರ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಮುಳಗಡೆ ಪ್ರದೇಶದಲ್ಲಿ ಇತ್ತೀಚೆಗಷ್ಟೇ ತಡರಾತ್ರಿ ವೇಳೆ ದರೋಡೆಕೋರರ ಗುಂಪೊಂದು ಇಲ್ಲಿನ ನಿವಾಸಿಯಾಗಿರುವ ಸಂತೋಷ ಕನ್ನಾಳ ಅವರ ಮನೆಗೆ ನುಗ್ಗಿ ಅವರಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದಿದ್ದರಿಂದ ಗಂಭೀರವಾಗಿ ಗಾಯಗೊಂಡು ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ವಾರ್ಡ್ ನಂ.33 ರ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.
ಇಡೀ ನಗರವನ್ನೇ ಬೆಚ್ಚಿಬೀಳಿಸಿರುವ ಇಂತಹದೊಂದು ದುಷ್ಕೃತ್ಯದ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರಿಂದಲೇ ಖುದ್ದಾಗಿಯೇ ಮಾಹಿತಿ ಪಡೆದ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರು ಗಾಯಾಳುವಿಗೆ ಸಾಂತ್ವನ ಹೇಳಿದರು.
ಇದೊಂದು ಅತ್ಯಂತ ಭಯಾನಕ ಕೃತ್ಯವಾಗಿದ್ದು, ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಆದರೆ ಈಗಾಗಲೇ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಿದ್ದು, ಯಾರೂ ಕೂಡ ಅನಾವಶ್ಯಕವಾಗಿ ಹೆದರಿಕೊಳ್ಳಬೇಡಿ. ಆದರೆ ಎಚ್ಚರಿಕೆಯಿಂದಿರಬೇಕು ಎಂದು ಗಾಯಾಳುವಿಗೆ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ನಂತರ ಜೈನಾಪುರ ಲೇಓಟ್‌ಗೆ ಭೇಟಿದ ನೀಡಿದ ವಾರ್ಡ್ ನಂ.33 ರ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರು ಅಲ್ಲಿನ ನಿವಾಸಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿ, ಈ ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಇದೊಂದು ಬಹಳ ಭಯಾನಕ ಕೃತ್ಯವಾಗಿದ್ದು, ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯೋನ್ಮುಖವಾಗಿದ್ದು, ಯಾರೂ ಕೂಡ ಅನಾವಶ್ಯಕವಾಗಿ ಹೆದರಿಕೊಳ್ಳಬೇಡಿ. ಆದರೆ ಎಚ್ಚರಿಕೆಯಿಂದಿರಬೇಕು ಎಂದು ನಿವಾಸಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಇನ್ನೊಂದೆಡೆ ಜಿಲ್ಲೆಯ ಸಮಾಜಸೇವಕರೂ ಆಗಿರುವ ಯುವಮುಖಂಡ ಮಂಜುನಾಥ.ಎಸ್.ಕಟ್ಟಿಮನಿ ಅವರು “ಕಳೆದ ಕೆಲ ದಿನಗಳಿಂದ ಗುಮ್ಮಟ ನಗರಿಯಲ್ಲಿಯೂ ಕಳ್ಳತನದ ಹಾವಳಿ ಶುರುವಿಟ್ಟುಕೊಂಡಿದ್ದ ಖದೀಮರಿಗೆ ಸಿಂಹಸ್ವಪ್ನವಾಗಿ ಕಾಡಿ, ಹೆಡೆಮುರಿ ಕಟ್ಟಿದ ವಿಜಯಪುರ ಜಿಲ್ಲೆಯ ಪೊಲೀಸ್‌ರು ಈ ಮೂಲಕ ತಾವು ಜನರ ರಕ್ಷಣೆಗೆ ಸರ್ವರೀತಿಯಲ್ಲಿಯೂ ಸಮರ್ಥರೆಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ದಕ್ಷ ಪೊಲೀಸ್ ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಜನರ ನಿದ್ದೆಗೆಡಿಸಿದ ದರೋಡೆಕೋರರ ಬಂಧನದ ವೇಳೆ ಖದೀಮರ ಮೇಲೆ ಗುಂಡಿನ ದಾಳಿ ಮಾಡುವುದರ ಮೂಲಕ ಸಾಹಸ ಮರೆದಿದ್ದಾರೆ. ಅಲ್ಲದೇ ಇದು ಅಪಾರ ಜನಮೆಚ್ಚುಗೆಗೂ ಪಾತ್ರವಾಗಿದೆ. ಈ ಮೂಲಕ ಆರಕ್ಷರು ತಮ್ಮ ವೃತ್ತಿಘನತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
ಅಂತೆಯೇ “ಇತ್ತೀಚಿನ ಇಂತಹ ಘಟನಾವಳಿಗಳಿಂದ ಜನರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಹೆದರಿಕೊಳ್ಳಬಾರದು. ವಿನಾಕಾರಣ ಆತಂಕಕ್ಕೆ ಒಳಗಾಗಬಾರದು. ಊಹಾಪೋಹಗಳಿಗೆ, ಗಾಳಿಸುದ್ಧಿಗಳಿಗೆ ಕಿವಿಗೊಡಬಾರದು. ಆದರೆ ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕು. ಅಗತ್ಯ ಸಂದರ್ಭಗಳಲ್ಲಿ ಜನರು ಕೂಡಲೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು. ಹಾಗೂ ಹತ್ತಿರದ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ತಮ್ಮ ಹತ್ತಿರವಿಟ್ಟುಕೊಂಡಿರಬೇಕು. ಯಾವುದೇ ಸಮಯದಲ್ಲಿಯೂ 100 ಸಂಖ್ಯೆಗೆ ಕರೆ ಮಾಡಬಹುದು” ಎಂದು ಜನರಿಗೆ ಅವರು ಸಲಹೆ ನೀಡಿದ್ದಾರೆ.