ಬೆಂಗಳೂರು, ಮೇ 20, ಬಡ ರೈತರಿಗೆ ಸಾಲ ಕೊಡಬೇಕೇ ಹೊರತು ಬೃಹತ್ ಕಂಪನಿಗಳಿಗಲ್ಲ. ಫ್ಯಾಕ್ಟರಿಗಳಿಗೆ ಕೊಡುವುದಕ್ಕಿಂತ ರೈತರಿಗೆ ಸಾಲ ಕೊಡಬೇಕು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಾಕೀತು ಮಾಡಿದ್ದಾರೆ.ಬೆಂಗಳೂರು ವಿಭಾಗದ ಸಹಕಾರ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಸಚಿವರು, ಸಕ್ಕರೆ ಕಾರ್ಖಾನೆಗಳಿಗೆ ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಗಳಿವೆ ಯಾವ ಆಧಾರದಲ್ಲಿ ಸಾಲ ಕೊಟ್ಟಿದ್ದೀರಿ? ಇದುವರೆಗೆ ಹೀಗೆ ಶುಗರ್ ಫ್ಯಾಕ್ಟರಿಗಳಿಗೆ ಎಷ್ಟು ಸಾಲ ಕೊಟ್ಟಿದ್ದೀರಿ? ಅದರಿಂದ ಎಷ್ಟು ಸಾಲ ಮರುಪಾವತಿಯಾಗಿದೆ? ಒಂದೂ ರೂಪಾಯಿ ಸಾಲ ಕಟ್ಟದ ಎಷ್ಟು ಫ್ಯಾಕ್ಟರಿಗಳಿವೆ? ಇದಕ್ಕೆ ಕಡಿವಾಣ ಬೀಳಬೇಕಿದೆ ಎಂದು ಹೇಳಿದರು.ನಾವು ಬಡ ರೈತರಿಗೆ ಸಾಲ ಕೊಡಲು ಇರುವುದು. ಹೀಗೆ ಫ್ಯಾಕ್ಟರಿಗಳಿಗೆ ಕೊಡುವುದಕ್ಕಿಂತ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ಬೇರೆ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವಂತಹ ಇಂಥ ಪರಿಪಾಠ ನಿಲ್ಲಬೇಕು. ಮುಂದಿನ ದಿನಗಳಲ್ಲಿ ನಾನು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.
ಅಲ್ಪಾವಧಿ ಸಾಲವನ್ನು ಹೊಸ ಫಲಾನುಭವಿಗಳಿಗೆ ನೀಡುವಂತಾಗಬೇಕು. ಸಾಲ ವಿತರಣೆಯಲ್ಲಿ ಯಾವುದೇ ತೊಂದರೆಯಾಗಬಾರದು. ಸಮಯಕ್ಕೆ ಸರಿಯಾಗಿ ಸಾಲ ವಿಯರಣೆಯಾಗದಿದ್ದರೆ ಬಳಕೆಯಾಗುವುದಕ್ಕಿಂತ ದುರ್ಬಳಕೆಯಾಗುವುದಕ್ಕೂ ಕಾರಣವಾಗುತ್ತದೆ. ನಬಾರ್ಡ್ ನಿಂದ ಈ ಬಾರಿ 1750 ಕೋಟಿ ಹೆಚ್ಚುವರಿ ಅನುದಾನ ನೀಡಿದೆ , ಈ ಹಿನ್ನೆಲೆಯಲ್ಲಿ ರೈತರಿಗೆ 14.5 ಸಾವಿರ ಕೋಟಿ ರೂಪಾಯಿ ಸಾಲ ವಿತರಣೆ ಗುರಿ ಇದ್ದು, ಎಲ್ಲರೂ ಈ ಗುರಿ ಮುಟ್ಟಬೇಕು ಎಂದು ಸೂಚಿಸಲಾಯಿತು.ಹಳೇ ಕೆಸಿಸಿ ಕಾರ್ಡ್ ಗಳು ಡಿ ಆ್ಯಕ್ಟಿವೇಟ್ ಆಗಿದ್ದು, ಅವುಗಳನ್ನು ಮತ್ತೆ ಆ್ಯಕ್ಟಿವೇಟ್ ಮಾಡಬೇಕು. ಇದರಿಂದ ಕೇಂದ್ರದಿಂದ ರೈತರಿಗೆ ಸಿಗುತ್ತಿರುವ ಸಹಾಧನಗಳು ತಲುಪುತ್ತಿಲ್ಲ. ಪತಿ ತೀರಿಕೊಂಡು ಕಾರ್ಡ್ ಗಳು ನಿಷ್ಕ್ರಿಯವಾಗಿದ್ದರೆ, ಫೀಲ್ಡ್ ಸುಪರ್ ವೈಸರ್ ಗಳು ಖಾತೆ ಬದಲಾವಣೆ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಲಾಯಿತು.
ಜಿಲ್ಲೆಗಳ ಪ್ರತ್ಯೇಕ ಪ್ರಗತಿ ಪರಿಶೀಲನಾ ಸಭೆ ಮುಂದಿನ ದಿನಗಳಲ್ಲಿ ಸಹಕಾರ ಇಲಾಖೆಯ ಎಲ್ಲ ವಿಭಾಗಗಳ ಪ್ರತ್ಯೇಕ ಸಭೆ ಕರೆಯಲಿದ್ದೇನೆ. ಅಲ್ಲಿ ನಿಮ್ಮ ಸಾಧನೆಗಳನ್ನು ಪರಿಶೀಲನೆ ನಡೆಸಿ ಗುರಿಯನ್ನು ನಿಗದಿಪಡಿಸುತ್ತೇನೆ. ಆ ಗುರಿಯನ್ನು ನೀವು ಮುಟ್ಟಲೇಬೇಕು. ಚುರುಕಿನಿಂದ ಕೆಲಸ ಮಾಡಿ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದು ಸಹಕಾರ ಸಚಿವರು ತಿಳಿಸಿದರು.
ಬಹುತೇಕ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲ ವಿತರಣೆ ಗುರಿಯನ್ನು ಮುಟ್ಟಲು ಸೂಚಿಸಿದರು . ಹೊಸ ರೈತರನ್ನು ಗುರುತಿಸಿ ಸಾಲ ವಿತರಿಸುವುದು ಸೇರಿದಂತೆ ಈಗಾಗಲೇ ರೈತರಿಗೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕಿದೆ, ನಮ್ಮ ಇಲಾಖೆಯಿಂದ ರೈತರಿಗೆ ಹೆಚ್ಚೆಚ್ಚು ಅನುಕೂಲಗಳಾಗಬೇಕೇ ವಿನಃ ರೈತರಿಗೆ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ನಾನು ಇಷ್ಟಪಟ್ಟು ಈ ಖಾತೆಯನ್ನು ತೆಗೆದುಕೊಂಡಿದ್ದೇನೆ. ಹಲವಾರು ವರ್ಷಗಳಿಂದ ಇಲಾಖೆಯನ್ನು ನೋಡಿದ್ದೇನೆ. ಕಷ್ಟಗಳು ಹಾಗೂ ನೋವನ್ನು ಉಂಡಿದ್ದೇನೆ. ಹೀಗಾಗಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು. ಒಟ್ಟಿನಲ್ಲಿ ಸಹಕಾರ ಇಲಾಖೆಗೆ ಒಳ್ಳೆಯದನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ನಾನು ಸ್ವತಃ ಈ ಖಾತೆಯನ್ನು ಕೇಳಿ ಪಡೆದುಕೊಂಡಿದ್ದೇನೆ. ಸಹಕಾರ ಇಲಾಖೆಯಲ್ಲಿ ಅಸಹಕಾರ ಇರಬಾರದು. ಎಲ್ಲರೂ ಸೇರಿ ಒಟ್ಟಾಗಿ ಸಾಗಬೇಕು ಎಂದು ತಿಳಿಸಿದರು.
ನಮ್ಮ ಇಲಾಖೆಗೆ ಸಹಕಾರ ಕೊಡಬೇಕು. ಯಾವುದೇ ಕಾರಣಕ್ಕೂ ಸಹಕಾರ ಇಲಾಖೆಗೆ ವಿರುದ್ಧವಾಗಿ ನಡೆಯಲಾರೆ ಎಂದು ಮುಖ್ಯಮಂತ್ರಿಗಳಿಗೆ ಕೋರಿಕೊಂಡಿದ್ದೆ. ಅವರೂ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಸಹಕಾರ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಮಹತ್ವ ಬರಲು ಏನೇನು ಮಾಡಬೇಕು ಎಂಬ ನಿಟ್ಟಿನಲ್ಲಿ ನಿಮ್ಮ ಹೊಸ ಚಿಂತನೆಗಳು ಬರಬೇಕು. ಆ ನಿಟ್ಟಿನಲ್ಲಿ ಒಂದು ಪ್ರಯೋಗವನ್ನು ನಾವು ಮಾಡಬೇಕಾಗುತ್ತದೆ ಎಂದು ಸಹಕಾರ ಸಚಿವರು ನಾನು ಯಾವುದೇ ಕಾರಣಕ್ಕೂ ಯಾವುದೇ ಅಧಿಕಾರಿಗಳಿಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ನನ್ನ ಬೆಂಬಲ ಸದಾ ನಿಮ್ಮ ಪರವಾಗಿದೆ. ಆದರೆ, ನನ್ನ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಬಾರದು. ಹಾಗಾದಲ್ಲಿ ನಾನು ಸಹಿಸಲಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.