ಶಿಗ್ಗಾವಿ 18: ಗ್ರಾಮ ನಕಾಶ ಎಂದು ಗುರುತಿಸಿಕೊಂಡ ರಸ್ತೆಗಳನ್ನು ರೀಸರ್ವೇ ಮೂಲಕ ರಸ್ತೆ ಅಭಿವೃದ್ಧಿಪಡಿಸಲು ಸರಕಾರ ಸೂಚಿಸಿದೆ. ಹೀಗಾಗಿ ರೈತರು ರಸ್ತೆ ಕಾಮಗಾರಿ ನಡೆಸುವಾಗ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ರವಿಕುಮಾರ ಕೊರವರ ಹೇಳಿದರು.
ತಾಲೂಕಿನ ಗಂಗೇಬಾವಿಯಲ್ಲಿ ಹೊಸೂರು, ಗಂಗ್ಯಾನೂರು ಗ್ರಾಮದ ರೈತರ ಸನ್ಮಾನ ಸ್ವೀಕರಿಸಿ ನಂತರ ಅವರು ಮಾತನಾಡಿ, ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಅಸಹಕಾರ ವ್ಯಕ್ತಪಡಿಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತಹಸೀಲ್ದಾರ್‌ರಿಗೆ ಅಧಿಕಾರ ಇದೆ. ಆದರೆ ರೈತರೂ ಸಹ ಅಭಿವೃದ್ಧಿ ಕೆಲಸಗಳಿಗೆ ತಕರಾರು ಮಾಡದೆ ಕೈಗೊಳ್ಳುವ ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಎಂ.ಎ.ಪಠಾಣ ಮಾತನಾಡಿ ರೈತರು ತಮ್ಮ ಹೊಲಗಳಿಗೆ ಹೋಗುವ ರಸ್ತೆ ಕಾಮಗಾರಿ ಕೈಗೊಳ್ಳುವ ಎಲ್ಲರೂ ಚರ್ಚಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ತಕರಾರು ಆಗದಂತೆ ನಿಮ್ಮ ಕೆಲಸ ಮಾಡಿ ಕೊಳ್ಳಿ. ತಹಸೀಲ್ದಾರ ಅವರ ಪ್ರಯತ್ನದಿಂದ ನೂರಾರು ರೈತರ ಸಂಚಾರಕ್ಕೆ ರಸ್ತೆ ನಿರ್ಮಾಣವಾಗಿದೆ ಎಂದರು.ಹೊಸೂರು ಗ್ರಾಮದ ಸರ್ವೇ ನಂಬರ್-224 ಅ ವ್ಯಾಪ್ತಿಯಲ್ಲಿನ ನೂರಾರು ರೈತರು, ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಸಂಚಾರಕ್ಕೆ ರಸ್ತೆ ನಿರ್ಮಿಸಿಕೊಡಲು ಕಳೆದ ಐದು ವರ್ಷಗಳಿಂದ ತಹಸೀಲ್ದಾರ್ ಕಚೇರಿಗೆ ಅರ್ಜಿ ಕೊಟ್ಟು ನಿತ್ಯೆ ಅಲೆದಾಡುತ್ತಿದ್ದರೂ ಈ ಹಿಂದಿನ ತಹಸೀಲ್ದಾರ್‌ರು ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಶಾಸಕ ಯಾಸೀರಖಾನ್ ಪಠಾಣ ಅವರ ಸಹಕಾರ, ವಿವಿಧ ರೈತ ಸಂಘಟನೆಗಳ ಮುಖಂಡರ ಬೆಂಬಲ ಪಡೆದು, ತಹಸೀಲ್ದಾರ ಕೊರವರ, ಕಾಂಗ್ರೆಸ್ ಮುಖಂಡ ಎಂ.ಎ.ಪಠಾಣ ಅವರ ಮಧ್ಯಸ್ಥಿಕೆಯಲ್ಲಿ ಖಾಸಗಿಯಾಗಿ ಭೂಮಾಲೀಕರ ಮನವೋಲಿಸಿ ಅವರ ಜಾಗದಲ್ಲಿ ಉಳಿದಂತೆ ನೂರಾರು ರೈತರು ತಮ್ಮ ಹೊಲಗಳಿಗೆ ಹೋಗಲು ಮಾಲ್ಕಿ ಜಾಗದಲ್ಲೇ ಸಂಚಾರಕ್ಕೆ ರಸ್ತೆ ನಿರ್ಮಿಸಿಕೊಟ್ಟಿದ್ದಕ್ಕೆ ರೈತ ಮುಖಂಡರು, ರೈತರು ತಹಸೀಲ್ದಾರ್‌ರನ್ನು ಸನ್ಮಾನಿಸಿ ಸಂಭ್ರಮಿಸಿದರು.ಬಸಯ್ಯ ಗೌರಿಮಠ, ಎಸ್.ಎಂ.ಬರದೂರು, ಮುತ್ತಣ್ಣ ಗುಡಗೇರಿ, ಈರಣ್ಣ ಸಮಗೊಂದ, ಬಸಲಿಂಗಪ್ಪ ನರಗುಂದ, ನಿಂಗಣ್ಣ ಬೆಂಚಲ್ಲಿ, ವೀರಣ್ಣ ಪಾಟೀಲ ಸೇರಿದಂತೆ ವಿವಿಧ ರೈತ ಮುಖಂಡರು ಈ ಭಾಗದ ರೈತರು ಕಾರ್ಯಕ್ರಮದಲ್ಲಿದ್ದರು.