ರೈತರಿಂದ ಹಣ ಪಡೆಯುತ್ತಿದ್ದಾರೆಂದು ಆರೋಪಿಸಿ ರೈತರು ಪ್ರತಿಭಟನೆ

ಗೋಕಾಕ :   ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಇಲ್ಲಿಯ ಕೃಷಿ ಇಲಾಖೆಯಲ್ಲಿ ರೈತರಿಂದ ಹಣವನ್ನು ಪಡೆಯುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಬುಧವಾರದಂದು ಜರುಗಿದೆ.

ಇಲ್ಲಿಯ ಕೃಷಿ ಇಲಾಖೆಯ ಕಂಪ್ಯೂಟರ್ ಆಪ್ರೇಟರ್ ಅವರು ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಸಲು ರೈತರಿಂದ ಹಣವನ್ನು ಪಡೆಯುತ್ತಿದ್ದಾರೆಂದು ಗಂಭಿರವಾಗಿ ಆರೋಪ ನಡೆಸಿದ್ದರ ಹಿನ್ನಲೇಯಲ್ಲಿ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಅವರು ಕೂಡಲೇ ಪರಿಶೀಲಿಸಿ ಅವರಿಗೆ ಸ್ಥಳದಲ್ಲಿಯೇ ಎಚ್ಚರಿಕೆಯ ನೋಟಿಸ್ ನೀಡಿ ಶಿಸ್ತು ಕ್ರಮವಹಿಸಲಾಗುವುದು ಎಂದು ತಿಳಿಸಿದ ಮೇಲೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರೈತ ಮುಖಂಡ ಭೀಮಶಿ ಗದಾಡಿ ಅವರು, ರೈತರಿಂದ ಬೇಕಾಬಿಟ್ಟಿಯಾಗಿ ಹಣ ಪಡೆಯುವ ಘಟನೆಗಳು ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಇಲಾಖೆಯಲ್ಲಿ ಜರುಗಿದರೇ ಅಂತವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಕುಮಾರ ತಿಗಡಿ, ಭೀಮಶಿ ಹುಲಕುಂದ, ಶಂಕರ ಮದಿಹಳ್ಳಿ, ರಾಯಪ್ಪ ಗೌಡಪ್ಪನವರ, ತುಕಾರಾಮ ದಾಸಪ್ಪನ್ನವರ ಸೇರಿದಂತೆ ಅನೇಕರು ಇದ್ದರು.