ಲೋಕದರ್ಶನ ವರದಿ
ಎಪ್ರಿಲ್ ಕೊನೆತನಕ ನೀರು ಹರಿಸುವಂತೆ ರೈತರ ಒತ್ತಾಯ
ಕಂಪ್ಲಿ 17: ಎಪ್ರಿಲ್ ಕೊನೆತನಕ ಎಲ್‌ಎಲ್‌ಸಿ ಕಾಲುವೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಆಗ್ರಹಿಸಿದರು.
ಇಲ್ಲಿನ ಅತಿಥಿ ಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಹಿಂಗಾರು ಬೆಳೆಗಳು ರೈತರ ಕೈಸೇರಬೇಕೆಂದರೆ, ಎಪ್ರಿಲ್ ಕೊನೆ ವಾರದತನಕ ನೀರು ಹರಿಸಬೇಕು. ತುಂಗಭದ್ರಾ ರೈತ ಸಂಘದ ಪುರುಷೋತ್ತಮಗೌಡ ಇವರು ಎಪ್ರಿಲ್ 10ವರೆಗೆ ನೀರು ಹರಿಸಿದರೆ ಸಾಕು ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ರೈತರ ಬಗ್ಗೆ ಅವರಿಗೆ ಕಾಳಜಿ ಮತ್ತು ಪರಿಜ್ಞಾನ ಇಲ್ಲದೇ ಇರುವುದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ರೈತರು ಹಗಲಿರುಳು ಎನ್ನದೇ ಬೆಳೆದ ಫಸಲಿಗಾಗಿ ಕಾಯುತ್ತಾರೆ. ಆದರೆ, ರೈತರಿಗೆ ತುಂಬ ತೊಂದರೆಯಾಗುತ್ತದೆ. ಮತ್ತು ಲಕ್ಷಾಂತರ ಬೆಳೆಗಳು ನೀರಿಲ್ಲದೇ, ಫಸಲುಗಳು ಒಣಗುವ ಆತಂಕ ಎದುರಾಗುತ್ತದೆ.
ಆದ್ದರಿಂದ ಕೆಳಭಾಗದ ರೈತರ ಬೆಳೆಗಳು ಕೈಸೇರಬೇಕೆಂದರೆ, ಎಪ್ರಿಲ್ ಕೊನೆತನಕ ನೀರು ಹರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿ.ವಿರೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ರೈತ ಮುಖಂಡರಾದ ಡಾ.ಎ.ಸಿ.ದಾನಪ್ಪ, ಕೊಟ್ಟೂರು ರಮೇಶ, ಆದೋನಿ ರಂಗಪ್ಪ, ಕೆ.ಸುದರ್ಶನ, ಡಿ.ಮುರಾರಿ, ನಾರಾಯಣರೆಡ್ಡಿ, ಜಡೆಪ್ಪ, ಗಂಗಣ್ಣ, ಅಂಜಿನಪ್ಪ, ಎನ್.ನಾಗರಾಜ, ಎಂ.ಮಂಜು ಸೇರಿದಂತೆ ಅನೇಕರಿದ್ದರು.