ಲೋಕದರ್ಶನವರದಿ
ರಾಣೇಬೆನ್ನೂರು24: ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಶಂಭುಲಿಂಗಪ್ಪ ಭರಮಪ್ಪ ಬಾತಿ(58) ಮೃತಪಟ್ಟ ರೈತ. ತನ್ನ ಹೆಸರಿನಲ್ಲಿ 1.6 ಎಕರೆ ಜಮೀನು ಇದ್ದು, 11 ಎಕರೆ ಲಾವಣಿಗೆ ಪಡೆದು ಕೃಷಿ ಮಾಡುತ್ತಿದ್ದನು. ಮೃತನು ಕೃಷಿಗಾಗಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ 4.5 ಲಕ್ಷ, ವ್ಯವಸಾಯ ಸಹಕಾರಿ ಸಂಘ 1.5 ಲಕ್ಷ ರೂ, ಹಾಗೂ ವಿಜಯಾ ಬ್ಯಾಂಕಿನಲ್ಲಿ ಬಂಗಾರವನ್ನು ಅಡವಿಟ್ಟು 1.73 ಲಕ್ಷ ಒಟ್ಟು 7.73 ಲಕ್ಷ ಸಾಲ ಮಾಡಿದ್ದನು. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ಮಾಡಿದ ಸಾಲವನ್ನು ತೀರಿಸಲಾಗದೆ ಮನನೊಂದು ಚಂದ್ರಪ್ಪ ಬಾತಿ ಎಂಬುವರ ಹೊಲದಲ್ಲಿ ಹುಣಸೆಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.