ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ನಿಧನ

ಮುಂಬೈ, ಡಿ28,ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ವಿಕಾಸ್ ಸಬ್ನಿಸ್ ಕಳೆದ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನಲ್ಲಿ ಇಂದು ಬೆಳಿಗ್ಗೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು. 2018ರಲ್ಲಿ ತಮ್ಮ ವೃತ್ತಿ ಜೀವನದ 50 ವಸಂತಗಳನ್ನು ಸಬ್ನಿಸ್ ಪೂರೈಸಿದ್ದರು. ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್ ಮತ್ತು ಬಾಳಠಾಕ್ರೆ ಅವರಿಂದ ಸ್ಫೂರ್ತಿಗೊಂಡು 1968ರಲ್ಲಿ ಸಬ್ನಿಸ್ ವೃತ್ತಿಜೀವನ ಆರಂಭಿಸಿದ್ದರು. ಟೈಮ್ಸ್ ಆಫ್ ಇಂಡಿಯಾ ಮತ್ತು ಮಿಡ್ ಡೇ ಸೇರಿದಂತೆ ಅನೇಕ ದಿನಪತ್ರಿಕೆಗಳಲ್ಲಿ ಪೂರ್ಣಕಾಲಿಕ ಸಿಬ್ಬಂದಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಪ್ರಚಲಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಬ್ನಿಸ್ ಅವರು ರೇಖಾಚಿತ್ರಗಳು ಮತ್ತು ರಾಜಕೀಯ ವ್ಯಂಗ್ಯಚಿತ್ರಗಳನ್ನು ಅವರು ರೂಪಿಸಿದ್ದರು. ಇವು ಸ್ಥಳೀಯದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ್ದಾಗಿದ್ದವು.