ಮನೆ ನುಗ್ಗಿ ದಾಂಧಲೆ ನಡೆಸಿದ ಕಾಡಾನೆ: ಕುಟುಂಬ ಪ್ರಾಣಾಪಾಯದಿಂದ ಪಾರು

ಮಡಿಕೇರಿ, ಜು.2: ಕಾಡಾನೆಯೊಂದು ಹಾಡಿಯ ಮನೆಯೊಂದಕ್ಕೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಇತರ ಸಾಮಗ್ರಿಗಳನ್ನು ಜಖಂಗೊಳಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯ ತಾಲೂಕಿನ ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಕೂಲಿ ಕಾರ್ಮಿಕರಾಗಿರುವ ಹಾಡಿಯ ಸೋಮುಣು ಚಂದ್ರ ಎಂಬವರಿಗೆ ಸೇರಿದ ಆಶ್ರಯ ಮನೆಗೆ ಆನೆ ನುಗ್ಗಿ ದಾಂಧನೆ ನಡೆಸಿದೆ. ಆನೆಯ ಶಬ್ಧ ಕೇಳುತ್ತಿದ್ದಂತೆ ಮನೆ ಮಂದಿ ಮನೆಯಿಂದ ಹೊರಗೆ ಓಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನು ತಿಂದಿರುವ ಆನೆ, ಪೀಠೋಪಕರಣ, ಪಾತ್ರೆಗಳನ್ನು ತುಳಿದು ಬಾಗಿಲು ಹೊಡೆದುರುಳಿಸಿ ಹೊರಗೆ ಹೋಗಿದೆ.
ಸೋಮುಣು ಚಂದ್ರ ಅವರು ತನ್ನ ಪತ್ನಿ ಮೂವರು ಪುಟ್ಟ ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದು, ಘಟನೆ ನಡೆಯುತ್ತಿದ್ದಂತೆ ಹೊರಗೆ ಓಡಿ ಹೋಗಿದ್ದಾರೆ.
ಕಾಡಾನೆ ದಾಳಿಯಿಂದ ಇಡೀ ಕುಟುಂಬ ಕಂಗಾಲಾಗಿದೆ.  ಮಕ್ಕಳು ಭಯದಿಂದ ತತ್ತರಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.