ಭುವನೇಶ್ವರ, ಫೆ 28 : ಎನ್‌ಆರ್‌ಸಿ ಹಾಗೂ ಸಿಎಎ ಕುರಿತು ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಇದರಿಂದ ದೇಶದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ವಿಪಕ್ಷಗಳನ್ನು ದೂರಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ಬಿಜೆಪಿ ಆಯೋಜಿಸಿದ್ದ ಸಿಎಎ ಪರ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಶಾ, ಎನ್ ಆರ್ ಸಿ ಹಾಗೂ ಸಿಎಎ ಕಾಯ್ದೆಗಳಿಂದ ಭಾರತೀಯ ಪ್ರಜೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಪಕ್ಷಗಳ ಸುಳ್ಳುಗಳಿಂದ ದೇಶಾದ್ಯಂತ ಸಂಘರ್ಷಗಳು ನಡೆಯುತ್ತಿವೆ. ಆದರೆ, ಸಿಎಎ ಕಾಯ್ದೆ ಯಾರೊಬ್ಬರ ಪೌರತ್ವ ಕಸಿದುಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಸ್ಪಿ, ಎಸ್ಪಿ, ಕಮ್ಯೂನಿಸ್ಟ್, ಕಾಂಗ್ರೆಸ್, ಟಿಎಂಸಿ ಸೇರಿ ಹಲವು ಪಕ್ಷಗಳು ಸಿಎಎ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಸಿಎಎ ಅಲ್ಪಸಂಖ್ಯಾತರ ಪೌರತ್ವ ಕಸಿದುಕೊಳ್ಳಲಿದೆ ಎಂದು ಹೇಳಿ ದೇಶದ ದಿಕ್ಕು ತಪ್ಪಿಸುತ್ತಿವೆ ಎಂದು ದೂರಿದರು.
ಸಿಎಎ ಕುರಿತಂತೆ ಸುಳ್ಳು ಸುದ್ದಿಗಳನ್ನು ವಿರೋಧ ಪಕ್ಷಗಳು ಏಕೆ ಹೇಳುತ್ತಿವೆ ಎಂಬುದು ಗೊತ್ತಿಲ್ಲ. ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆ ಸಿಎಎ, ಇದರರ್ಥ ಯಾರು ಪೌರತ್ವ ಕಳೆದುಕೊಳ್ಳುವುದಿಲ್ಲ. ಬದಲಿಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ದೊರೆಯಲಿದೆ. ಈ ಉದ್ದೇಶದಿಂದಲೇ ಸಿಎಎ ಜಾರಿಗೆ ತರಲಾಗಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.
ದೆಹಲಿಯಲ್ಲ್ಲ ಸಿಎಎ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ ಅಮಿತ್ ಶಾ ಅವರ ಸಿಎಎ ಪರ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ. ದೆಹಲಿ ಹಿಂಸಾಚಾರದಲ್ಲಿ ಈವರೆಗೂ 43 ಜನರು ಸಾವನ್ನಪ್ಪಿದ್ದಾರೆ.
ಈ ಹಿಂದೆ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಾಗಿ ಕಾಂಗ್ರೆಸ್ ಹಲವು ಸಲ ಭರವಸೆ ನೀಡಿತ್ತಾದರೂ ಈಡೇರಿಸಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಜನರ ಸೂಕ್ಷ್ಮ ಭಾವನೆಗಳಿಗೆ ಸ್ಪಂದಿಸಿದೆ. ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಮುಂದಾಗಿದೆ ಎಂದು ಅಮಿತ್ ಶಾ ಭುವನೇಶ್ವರದಲ್ಲಿ ತಿಳಿಸಿದ್ದಾರೆ.