ಚಿಕ್ಕಮಗಳೂರು/ಬೆಂಗಳೂರು, ಮೇ 23, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ವೈದ್ಯಾಧಿಕಾರಿಗೆ ಕೊರೋನಾ ಸೋಂಕು ತಗುಲಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಈ ವಿವರ ನೀಡಿದ ಅವರು, ವೈದ್ಯಾಧಿಕಾರಿಗೆ ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ತಪ್ಪು ವರದಿ ಬಂದಿತ್ತು. ಅವರ ಗಂಟಲ ದ್ರವ ಮಾದರಿಯ ಮರುಪರೀಕ್ಷೆ ನಡೆಸಿದಾಗ, ಸೋಂಕು ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ ಎಂದು ವಿವರಿಸಿದರು.
ಹಾಸನ, ಶಿವಮೊಗ್ಗದ ಪ್ರಯೋಗಾಲಯಗಳಲ್ಲಿ ಗಂಟಲು ದ್ರವದ ಮರುಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು. ಅವರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದ್ದು,ಅವರನ್ನು ಕೂಡ ಬಿಡುಗಡೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ವೈದ್ಯರ ಪ್ರಾಥಮಿಕ ಸಂಪರ್ಕದಲ್ಲಿದ್ದ 485 ಮಂದಿ, ದ್ವಿತೀಯ ಸಂಪರ್ಕದಲ್ಲಿ 961 ಮಂದಿ ಸೇರಿ 1446 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಈ ಪೈಕಿ 28 ಜನರ ಪರೀಕ್ಷಾ ಫಲಿತಾಂಶ ಬಂದಿದ್ದು,ಸೋಂಕು ಇಲ್ಲ ಎಂದು ತಿಳಿದುಬಂದಿದೆ ಎಂದರು.