ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಫಡ್ನವೀಸ್

fadnavis

ಮುಂಬೈ, ನ 26:  ವಿಧಾನಸಭೆಯಲ್ಲಿ  ಬಹುಮತ  ಸಾಬೀತು ಪಡಿಸುವ ಮುನ್ನವೇ  ಬಿಜೆಪಿ ಹಿಂದೆ ಸರಿದಿದೆ. ಎನ್‌ಸಿಪಿ ನಾಯಕ  ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಿದ್ದಾರೆ.

ರಾಜ್ಯದಲ್ಲಿ  ಉಂಟಾಗಿರುವ  ರಾಜಕೀಯ  ಬಿಕ್ಕಟ್ಟಿನ  ನಡುವೆ   ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕರಿಸಿದ 79 ಗಂಟೆಗಳಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.  ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರಿಗೆ  ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. 

ಮಂಗಳವಾರ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಫಡ್ನವೀಸ್  ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.   ಬಿಜೆಪಿ  ಪಕ್ಷಾಂತರ ಪ್ರೋತ್ಸಾಹಿಸುವ ಪಕ್ಷವಲ್ಲ, ಪ್ರತಿಪಕ್ಷವಾಗಿ  ರಾಜ್ಯದ ಜನರ  ಪರವಾಗಿ  ಹೋರಾಟ ನಡೆಸಲಿದೆ ಸ್ಪಷ್ಟಪಡಿಸಿದರು.  ಕೇವಲ ಅಧಿಕಾರಕ್ಕಾಗಿ ರಚನೆಗೊಂಡಿರುವ ಶಿವಸೇನೆ ನೇತೃತ್ವದ ಸರ್ಕಾರ  ಮಧ್ಯದಲ್ಲೇ  ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಮಾಧ್ಯಮಗೋಷ್ಠಿಯಲ್ಲಿ ಫಡ್ನವೀಸ್,     ಶಿವಸೇನೆ  ವಿರುದ್ದ  ಆಕ್ರೋಶ  ವ್ಯಕ್ತಪಡಿಸಿದರು. ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಂಡಿದ್ದ  ಶಿವಸೇನೆ ನಂತರ  ಬಿಜೆಪಿಗೆ ಮೋಸ ಮಾಡಿದೆ.  ಅಧಿಕಾರಕ್ಕಾಗಿ  ಎನ್‌ಸಿಪಿ ಮತ್ತು ಕಾಂಗ್ರೆಸ್  ಜತೆ  

ಕೈ ಜೋಡಿಸಿದೆ ಎಂದು ಆರೋಪಿಸಿದರು.  ಪ್ರತಿಪಕ್ಷಗಳೊಂದಿಗೆ  ಕೈಜೋಡಿಸುವ ಮೂಲಕ ಶಿವಸೇನೆ ಜನರ ತೀರ್ಪಿಗೆ ವಿರುದ್ಧವಾಗಿ ವರ್ತಿಸಿದೆ. ಸಿದ್ಧಾಂತಗಳ ವಿರುದ್ಧವಾಗಿ   ಅಧಿಕಾರಕ್ಕಾಗಿ  ಉದ್ದವ್ ಠಾಕ್ರೆ  ಚೌಕಾಶಿ ನಡೆಸಿದ್ದಾರೆ.  ಚುನಾವಣೆಯಲ್ಲಿ   ಮರಾಠಿಗರು  ಬಿಜೆಪಿಯನ್ನು  ದೊಡ್ಡ ಪಕ್ಷವನ್ನಾಗಿ  ಚುನಾಯಿಸಿದ್ದರು.  ಜನಾದೇಶದ ಪ್ರಕಾರ ನಡೆದುಕೊಳ್ಳುವುದಾಗಿ,  ವಿಧಾನಸಭೆಯಲ್ಲಿ  ಬಹುಮತ ಇಲ್ಲದ ಕಾರಣ  ಮುಖ್ಯಮಂತ್ರಿ  ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. 

ಬುಧವಾರ ಸಂಜೆಯೊಳಗೆ   ವಿಧಾನಸಭೆಯಲ್ಲಿ  ಬಹುಮತ  ಸಾಬೀತು ಪಡಿಸುವಂತೆ  ಸುಪ್ರೀಂ ಕೋರ್ಟ್  ಆದೇಶ  ನೀಡಿತ್ತು. ಆದರೆ,   ಬಹುಮತ ಸಾಬೀತಿಗೆ ಮುನ್ನವೇ ಫಡ್ನವೀಸ್ ಸರ್ಕಾರ ರಾಜೀನಾಮೆ ನೀಡಿದೆ.  ಎನ್‌ಸಿಪಿ ವಿರುದ್ಧ  ಬಂಡಾಯ  ಮೊಳಗಿಸಲು ಅಜಿತ್‌ ಪವಾರ್   ಅವರಿಗೆ ಪ್ರೇರೇಪಣೆ  ನೀಡಿದ್ದ  ಬಿಜೆಪಿ,    ಅವರು ಉಪ  ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸುಂತೆಮಾಡಿತ್ತು.  ಅಜಿತ್ ಅವರ  ಹಿಂದೆ  ಕನಿಷ್ಟ  30 ಶಾಸಕರು ಬರಬಹುದು ಎಂದು ಆಸೆಹೊಂದಿದ್ದ   ಫಡ್ನವೀಸ್    ಅವರಿಗೆ ನಿರಾಶೆ ಉಂಟಾಗಿದೆ.    ಅಂತಿಮ ಘಟ್ಟದಲ್ಲಿ ಶರದ್ ಪವಾರ್   ಪ್ರದರ್ಶಿಸಿ ಚಾತುರ್ಯ ದಿಂದಾಗಿ   ಅಜಿತ್  ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ  ವಿಧಾನಸಭೆಯಲ್ಲಿ   ಬಹುಮತ  ಸಾಬೀತು ಸಾಧ್ಯವಿಲ್ಲ  ಎಂಬುದು   ಮನದಟ್ಟಾದ ನಂತರ ಫಡ್ನವೀಸ್  ಮುಖ್ಯಮಂತ್ರಿ  ಸ್ಥಾನಕ್ಕೆ ರಾಜೀನಾಮೆ ನೀಡಿದರು.