ಗಂಭೀರ ವಿಷಯಗಳ ಕುರಿತು ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಚರ್ಚೆಗೆ ಎಫ್‌ಒಎಬಿ ನಿರ್ಧಾರ

ಗಂಭೀರ ವಿಷಯಗಳ ಕುರಿತು  ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಚರ್ಚೆಗೆ ಎಫ್‌ಒಎಬಿ ನಿರ್ಧಾರ FOAB decides to hold discussions with ministers, MLAs, and district collectors on serious issues

ಬೆಳಗಾವಿ 15:  ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ತುರ್ತಾಗಿ ಆಗಬೇಕಿರುವ 7 ಗಂಭೀರ ವಿಷಯಗಳನ್ನು ಗುರುತಿಸಿರುವ  ಎಫ್‌ಒಎಬಿ (ಫೆಡರೇಶನ್ ಆಫ್ ಅಸೋಸಿಯೇಶನ್ಸ್‌ ಆಫ್ ಬೆಳಗಾವಿ), ಈ  ಕುರಿತು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ನಿರ್ಧರಿಸಿದೆ. ಗುರುವಾರ ಸಂಜೆ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸಭೆ ಸೇರಿದ್ದ ಎಫ್‌ಒಎಬಿಯ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ನಗರದ ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕಿರುವ ರೈಲ್ವೆ ಮೇಲ್ಸೆತುವೆ ಯೋಜನೆ, ಸಂಚಾರ ದಟ್ಟಣೆ ನಿವಾರಿಸಬೇಕಿರುವ ರಿಂಗ್ ರಸ್ತೆ, ಕೈತಪ್ಪಿ ಹೋಗುವ ಹಂತದಲ್ಲಿರುವ ಸೀಟೀಸ್ 2, ನಿರ್ಲಕ್ಷ್ಯಕ್ಕೊಳಗಾಗಿರುವ ಸಿಡಿಪಿ ಹಾಗೂ ಎಸ್ ಟಿಪಿ ಯೋಜನೆ, ತುರ್ತಾಗಿ ಮೇಲ್ದರ್ಜೆಗೇರಿಸಬೇಕಾಗಿರುವ ಹೆಸ್ಕಾಂ ಪವರ್ ಸ್ಟೇಶನ್ಸ್‌, ಗೇಲ್ ಗ್ಯಾಸ್ ಪೈಪ್ ಲೈನ್, ಬಯೋಗ್ಯಾಸ್, ಗೋಬರ್ ಧನ್ ಯೋಜನೆಗಳನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದೆ.ಈಗಾಗಲೆ ನಿರ್ಮಾಣವಾಗಿರುವ ಅವೈಜ್ಞಾನಿಕ ರೈಲ್ವೆ ಮೇಲ್ಸೆತುವೆಗಳಿಂದಾಗಿ ನಗರದಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ಆಗಬೇಕಿರುವ ಇನ್ನಷ್ಟು ಮೇಲ್ಸೆತುವೆಗಳಿಂದ ನಗರ ಅಭಿವೃದ್ಧಿಗೆ ಮಾರಕವಾಗುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.  

ರಸ್ತೆಗೆ ಮೇಲ್ಸೆತುವೆ ಬದಲು ರೈಲ್ವೆ ಟ್ರ್ಯಕ್ ಗೆ ಮೇಲ್ಸೆತುವೆ ಮಾಡಿ, ಎಲಿವೇಟೆಡ್ ರೈಲ್ವೆ ಟ್ರ್ಯಕ್ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗ ನೀಡಬಹುದು, ನಗರ ಸೌಂದರ್ಯ, ಪಾರಂಪರಿಕ ತಾಣಗಳ ಸಂರಕ್ಷಣೆ ಜೊತೆಗೆ ಹಲವಾರು ಸಕಾರಾತ್ಮಕ ಅಂಶಗಳನ್ನು ಇದು ಒಳಗೊಂಡಿದೆ ಎನ್ನುವುದನ್ನು, ದೇಶದ ಅನೇಕ ನಗರಗಳ ಸಕ್ಸಸ್ ಸ್ಟೋರಿಗಳೊಂದಿಗೆ ತಜ್ಞರು ಸಭೆಯಲ್ಲಿ ವಿವರಿಸಿದರು. ಕೇಂದ್ರ ಸರಕಾರದ ಸೀಟೀಸ್ 2 ಯೋಜನೆಗೆ ಬೆಳಗಾವಿ ಆಯ್ಕೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೈತಪ್ಪುವ ಹಂತದಲ್ಲಿದೆ. ಇದು ಬೆಳಗಾವಿ ಅಭಿವೃದ್ಧಿಗೆ ದೊಡ್ಡಮಟ್ಟದ ಹಿನ್ನಡೆಯಾಗಲಿದೆ ಎನ್ನುವುದನ್ನೂ ಸ್ಪಷ್ಟ ಮಾಹಿತಿಗಳೊಂದಿಗೆ ವಿವರಿಸಲಾಯಿತು.

ಕೇವಲ 2 ಹಳ್ಳಿಗಳ ಭೂ ಸ್ವಾಧೀನ ಪ್ರಕ್ರಿಯೆ ಆಗದಿರುವುದರಿಂದ ಸುದೀರ್ಘ ಅವಧಿಯಿಂದ ರಿಂಗ್ ರಸ್ತೆ ಯೋಜನೆಗೆ ಹಿನ್ನಡೆಯುಂಟಾಗಿದ್ದು, ಇದರಿಂದ ನಗರದ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ ಎನ್ನುವ ವಿಷಯವನ್ನು ಚರ್ಚಿಸಲಾಯಿತು.ನಗರ ಬೆಳೆದಂತೆ ಬದಲಾಗಬೇಕಿದ್ದ ಸಿಡಿಪಿ ಯೋಜನೆ ಸುದೀರ್ಘ ಅವಧಿಯಿಂದ  ನನೆಗುದಿಗೆ ಬಿದ್ದಿರುವುದರಿಂದ ಸಕಾರಾತ್ಮಕವಾಗಿ ನಗರದ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ವಾರ್ಡಿಗೊಂದು ಇರಬೇಕಿದ್ದ ಎಸ್ ಟಿಪಿ ಯೋಜನೆ ನಗರಕ್ಕೊಂದೂ ಇಲ್ಲದಿರುವುದು ಬೆಳೆಯುತ್ತಿರುವ ನಗರಕ್ಕೆ ಮಾರಕವಾಗಿದೆ. ಕೂಡಲೇ ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನಹರಿಸಬೇಕಿದೆ ಎನ್ನುವ ಅಂಶಗಳನ್ನು ಗಮನಕ್ಕೆ ತರಲಾಯಿತು.ನಗರದ ಎಲ್ಲ ವಿದ್ಯುತ್ ಸ್ಟೇಶನ್ ಗಳು ಮಿತಿಮೀರಿದ ಹೊರೆಯಿಂದ ಕೂಡಿವೆ. ತುರ್ತಾಗಿ 400 ಕೆವಿ ಸ್ಟೇಶನ್ ಮತ್ತು ಹಲವು ಸಬ್ ಸ್ಟೇಶನ್ ಗಳು ಆಗದಿದ್ದರೆ ಇನ್ನೊಂದ ವರ್ಷದಲ್ಲಿ ನಗರ ದೊಡ್ಡ ಸಮಸ್ಯೆಗೆ ಒಳಗಾಗಲಿದೆ ಎನ್ನುವ ಕುರಿತು ಗಮನ ಸೆಳೆಯಲಾಯಿತು. ಇದರ ಜೊತೆಗೆ ಇನ್ನೂ ಕೆಲವು ವಿಷಯಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.  

ಹಲಗಾ - ಮಚ್ಛೆ ಬೈ ಪಾಸ್ ಮತ್ತು ಯಡಿಯೂರ​‍್ಪ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮಾ ಫುಲೆ ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡದೆ ನರದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯ ಆರಂಭಿಸುವುದರಿಂದ ಆಗಬಹುದಾದ ಸಂಚಾರ ದಟ್ಟಣೆ ಕುರಿತು ಸಭೆ ಕಳವಳ ವ್ಯಕ್ತಪಡಿಸಿತು. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಜೊತೆ ಮೊದಲ ಸುತ್ತಿನ ಚರ್ಚೆ ನಡೆಸಿ, ನಂತರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಸಚಿವರು ಹಾಗೂ ಬೆಳಗಾವಿ ನಗರದ ಶಾಸಕರೊಂದಿಗೆ ಸಭೆ ನಡೆಸಿ ಗಮನ ಸೆಳೆಯಬೇಕು ಎನ್ನುವ ನಿರ್ಧಾರವನ್ನು ಸಭೆ ಕೈಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಉದ್ಯಮಿ, ಫೌಂಡ್ರಿ ಕ್ಲಸ್ಟರ್ ಚೇರಮನ್ ರಾಮ್ ಭಂಡಾರೆ ಮಾತನಾಡಿ, ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ಎಫ್‌ಒಎಬಿ ಸಂಘಟನೆಯ ಹೆಜ್ಜೆ ಅತ್ಯಂತ ಪ್ರಶಂಸನೀಯವಾಗಿದೆ, ಇದು ಅಗತ್ಯವಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳನ್ನು, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಕೆಲಸ ಮಾಡಬೇಕು ಎಂದರು.  

ಎಫ್‌ಒಎಬಿ ಸಂಚಾಲಕ ಚೈತನ್ಯ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನೋರ್ವ ಸಂಚಾಲಕ ಎಂ.ಕೆ.ಹೆಗಡೆ, ಮುಂದಿನ ಯೋಜನೆಗಳ ಕುರಿತು ವಿವರಿಸಿ, ವಂದಿಸಿದರು. ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಪ್ರೊಪೇಶನಲ್ ಫೋರಮ್ ನ ಡಾ.ಎಚ್‌.ಬಿ.ರಾಜಶೇಖರ ಮತ್ತು ಬಿ.ಜಿ.ಧರೆಣ್ಣಿ, ಲಘು ಉದ್ಯೋಗ ಭಾರತಿಯ ಸಚಿನ್ ಸಬ್ನಿಸ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ ನ ಸಿ.ಬಿ.ಹಿರೇಮಠ, ಕ್ರೆಡೈ ನ ಯುವರಾಜ ಹುಲಜಿ ಮತ್ತು ಆನಂದ ಕುಲಕರ್ಣಿ, ಫೌಂಡ್ರಿ ಕ್ಲಸ್ಟರ್ ನ ಸದಾನಂದ ಹುಂಬರವಾಡಿ ಮತ್ತು ವಿಜಯ ಮುಚ್ಚಂಡಿಕರ್, ಎಫ್‌ಒಎಬಿ ಸಂಯೋಜಕ ರಾಜೇಂದ್ರ ಮುಂದಡ, ಕೆಮಿಸ್ಟ್‌ ಆ್ಯಂಡ್ ಡ್ರಗ್ಗಿಸ್ಟ್‌ ಅಸೋಸಿಯೇಶನ್ ನ ಎಸ್‌.ಎಸ್‌.ಗಡಿಯಣ್ಣವರ್,  ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪ್ರಸನ್ನ ಕೋಚರಿ, ಎಸ್‌.ಬಿ.ದಂಡಗಿ, ಅಮಿತ್ ಕಾಲಕುಂದ್ರಿ, ಅನಿಲ ರಾಮದುರ್ಗ ಮೊದಲಾದವರು ಭಾಗವಹಿಸಿದ್ದರು.   ಡ್ರಗ್ಗಿಸ್ಟ್‌ ಅಸೋಸಿಯೇಶನ್ ನ ಎಸ್‌.ಎಸ್‌.ಗಡಿಯಣ್ಣವರ್,  ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪ್ರಸನ್ನ ಕೋಚರಿ, ಎಸ್‌.ಬಿ.ದಂಡಗಿ, ಅಮಿತ್ ಕಾಲಕುಂದ್ರಿ, ಅನಿಲ ರಾಮದುರ್ಗ ಮೊದಲಾದವರು ಭಾಗವಹಿಸಿದ್ದರು.