ನವೆಂಬರ್ ನಲ್ಲಿ ಫಿಫಾ ಮಹಿಳಾ ವಿಶ್ವಕಪ್ ಸಾಧ್ಯತೆ

ನವದೆಹಲಿ, ಮಾ 31, ಕೋವಿಡ್-19 ಸಾಂಕ್ರಮಿಕ ರೋಗದಿಂದಾಗಿ ಪ್ರತಿಷ್ಠಿತ ಟೂರ್ನಿಗಳು ಸೇರಿ ಜಗತ್ತಿನ ಬಹುತೇಕ ಕ್ರೀಡಾ ಚಟುವಟಿಕೆಗಳು ಈಗಾಗಲೇ ರದ್ದು ಹಾಗೂ ಮುಂದೂಡಿಕೆಯಾಗಿದ್ದರೂ ಮುಂಬರುವ ನವೆಂಬರ್ ನಲ್ಲಿ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಫಿಫಾ ಆಯೋಜಿಸುವ ಕುರಿತು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ವಿಶ್ವಾಸ ವ್ಯಕ್ತಪಡಿಸಿದೆ.
ಏಳು ತಿಂಗಳಿನಿಂದ ಸಂಘಟನಾ ಸಮಿತಿಯು ಉನ್ನತ ವಯೋಮಾನದ ಪಂದ್ಯಾವಳಿಗಾಗಿ ಸಿದ್ಧತೆ ನಡೆಸುತ್ತಿದೆ.ಆದರೆ ಇದೆಲ್ಲವೂ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿಯನ್ನು ಅವಲಂಬಿಸಿದೆ ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಹೇಳಿದ್ದಾರೆ.
''ಫಿಫಾ ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಮಂಡಳಿ ಎಲ್ಲ ಬೆಳವಣಿಗೆಗಳ ಬಗ್ಗೆ ತೀವ್ರ ನಿಗಾ ಇಟ್ಟಿದ್ದು, ಅದು ಹೇಗೆ ನಡೆಯುತ್ತದೆ ಎಂಬುದನ್ನು ನಾವು ವೀಕ್ಷಿಸಲಿದ್ದೇವೆ,'' ಎಂದು ದಾಸ್ ನುಡಿದಿದ್ದಾರೆ.ಟೂರ್ನಿಗೆ ಸ್ವಲ್ಪ ಸಮಯಾವಕಾಶವಿರುವುದನ್ನು ಒಪ್ಪಿಕೊಂಡಿರುವ ಅವರು, "ಹೌದು, ಇನ್ನೂ ಸಾಕಷ್ಟು ಸಮಯ ಉಳಿದಿದೆ ಮತ್ತು ಮುಂಬರುವ ಬೆಳವಣಿಗೆಗಳನ್ನು ಕಾದು ನೋಡಲಿದ್ದೇವೆ," ಎಂದು ತಿಳಿಸಿದ್ದಾರೆ.ನವೆಂಬರ್ 2 ರಿಂದ 21 ರವರೆಗೆ ವಿಶ್ವಕಪ್ ನಡೆಯಲಿದ್ದು, ನವೀ ಮುಂಬಯಿ, ಕೋಲ್ಕೊತಾ, ಅಹಮದಾಬಾದ್, ಭುವನೇಶ್ವರ ಮತ್ತು ಗುವಾಹಟಿಯಲ್ಲಿ ಪಂದ್ಯಗಳು ನಡೆಯಲಿವೆ. ಎಐಎಫ್ಎಫ್ ನವೆಂಬರ್ ನಲ್ಲಿ17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಆಯೋಜಿಸುವ ಭರವಸೆ ಹೊಂದಿರುವ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.