ಎಫ್‌ಎ ಕ್ಯೂ ಗುಣಮಟ್ಟದ ಭತ್ತ ಹುಟ್ಟುವಳಿ ಖರೀದಿಗೆ ಬೆಂಬಲ ಬೆಲೆ ನಿಗದಿ

FAQ Support price for purchase of quality paddy crop

ಎಫ್‌ಎ ಕ್ಯೂ ಗುಣಮಟ್ಟದ ಭತ್ತ ಹುಟ್ಟುವಳಿ ಖರೀದಿಗೆ ಬೆಂಬಲ ಬೆಲೆ ನಿಗದಿ  

ಗದಗ 24: 2024-2025 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ  ರೈತರಿಂದ ಎಫ್‌.ಎ.ಕ್ಯೂ ಗುಣಮಟ್ಟದ ಭತ್ತ ಉತ್ಪನ್ನವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.  ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ. ಎನ್‌.  ಶ್ರೀದರ ತಿಳಿಸಿದರು.    ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಸೋಮವಾರ 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ  ಭತ್ತ  ಉತ್ಪನ್ನವನ್ನು  ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಸರ್ಕಾರದ ಮಾನದಂಡಗಳನ್ವಯ ಎಫ್‌.ಎ.ಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು. ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್‌ಗಳನ್ನು ನೇಮಿಸಬೇಕು. ಎಫ್‌.ಎ.ಕ್ಯೂ ಗುಣಮಟ್ಟದ ಖರೀದಿಸಲು ಹಾಗೂ ಬತ್ತ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಬತ್ತ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ. ಎನ್ ಶ್ರೀದರ ಸೂಚಿಸಿದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ  ಜಂಟಿ ನಿರ್ದೇಶಕ ವಿನೋದಕುಮಾರ್ ಹೆಗ್ಗಳಗಿ ಅವರು  ಮಾತನಾಡಿ ಎಫ್‌.ಎ.ಕ್ಯೂ ಗುಣಮಟ್ಟದ ಭತ್ತ ಹುಟ್ಟುವಳಿಗೆ ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್ ಗೆ ರೂ. 2300/- ,  ಗ್ರೇಡ ಎ ಭತ್ತ ರೂ/-2320 ರಂತೆ  ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶ ದಿನಾಂಕ 20-03-2025 ರನುಸಾರ ಗದಗ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕಫೆಡ್)  ಸಂಸ್ಥೆಯನ್ನು  ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ ಎಂದರು.   ಭತ್ತ ಉತ್ಪನ್ನ ಖರೀದಿ ನೋಂದಣಿ ದಿನಾಂಕವನ್ನು 20-3-2025 ರಿಂದ 25-4-2025 ರವರೆಗೆ ನಿಗದಿಪಡಿಸಲಾಗಿದೆ. ಖರೀದಿಗೆ ಸಂಬಂಧಿಸಿದಂತೆ ಖರೀದಿ ಏಜೆನ್ಸಿಯವರು ನೋಂದಣಿ ಕೇಂದ್ರ ತೆರೆದು ನೋಂದಣಿ ಕಾರ್ಯವನ್ನು ಹಾಗೂ ದಿ:1-4-2025 ರಿಂದ 31-5-2025 ರವರೆಗೆ ಖರೀದಿ ಪ್ರಕ್ರಿಯೆ ಕೈಗೊಳ್ಳಲು  ಸೂಚಿಸಲಾಯಿತು.   ಸರ್ಕಾರದಿಂದ ನೇಮಿಸಲ್ಪಟ್ಟ ಖರೀದಿ ಏಜೆನ್ಸಿ ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ  ಭತ್ತವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಟ 50 ಕ್ವಿಂಟಲ್ ಖರೀದಿಸಲು ಸೂಚಿಸಲಾಯಿತು.  ಜಿಲ್ಲೆಯಲ್ಲಿ  ಮುಂಡರಗಿ ತಾಲೂಕಿನಲ್ಲಿನ ಶಾಖಾ  ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ, ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಮುಂಡರಗಿ  ಇಲ್ಲಿ  ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಲಾಯಿತು.   ಸಭೆಯಲ್ಲಿ  ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ , ಕೃಷಿ ಮಾರಾಟ ಇಲಾಖೆ, , ಕೆ.ಎಫ್‌.ಸಿ.ಎಸ್‌.ಸಿ, ಮಾರ್ಕೆಟಿಂಗ್ ಫೆಡರೇಶನ್ ಗದಗ , ನರಗುಂದ ಹಾಗೂ ಗದಗ , ಕಾನೂನು ಮಾಪನ ಇಲಾಖೆ ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳು ಹಾಜರಿದ್ದರು.