ಕಾರವಾರ ಜುಲೈ 11 : ಜನಸಂಖ್ಯೆ ಹೆಚ್ಚಳದಿಂದ ಆಥರ್ಿಕ ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುವದರೊಂದಿಗೆ ದೇಶದ ಅಭಿವೃದ್ಧಿಗೆ ಮಾರಕ ಉಂಟಾಗುತ್ತದೆ ಎಂದು ಶಿವಜ್ಯೋತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಅನು ಕಳಸ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಮಿತಿಮೀರಿದ ಜನಸಂಖ್ಯೆ ಒಂದು ಸಮಸ್ಯೆ ಆಗಿದ್ದು, ಇದರಿಂದ ಬಡತನ ನಿರುದ್ಯೋಗ, ಆಥರ್ಿಕ ಮತ್ತು ಸಾಮಾಜಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ದೇಶ ಸಂಪತಭರಿತ ದೇಶವಾಗಬೇಕಾದರೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯವಾಗಿದೆ. ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಜನಸಂಖ್ಯೆ ನಿಯಂತ್ರಿಸಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಜಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಸಂಪನ್ಮೂಲ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಗುಣಮಟ್ಟದ ಜೀವನವನ್ನು ನಡೆಸಲು ಸಾದ್ಯವಾಗುವಂತಹ ಒಂದು ಮಟ್ಟದ ಜನಸಂಖ್ಯೆಯ ಪ್ರಮಾಣ ಸಾಧಿಸುವುದು ಜನಸಂಖ್ಯಾ ಸ್ಥಿರತೆಯಾಗಿರುತ್ತದೆ. ಜನಸಂಖ್ಯಾ ಸ್ಥಿರತೆಯನ್ನು ಸಾಧಿಸದಿದ್ದಲ್ಲಿ ದೇಶದ ಅಭಿವೃದ್ಧಿ ಕಾರ್ಯಗಳು ಯಶಸ್ಸನ್ನು ಕಾಣಲಾರವು. ಯೋಜನಾ ಬದ್ದ ಕುಟುಂಬ ಇದಕ್ಕೆ ಸೂಕ್ತ ಪರಿಹಾರವಾಗಿದೆ.
ಸಾರ್ಥಕತೆಯ ನಾಳೆಯ ಜೀವನಕ್ಕಾಗಿ ಕುಟುಂಬ ಯೋಜನೆಗಳ ಬಳಕೆ ಎಂಬುದು ಈ ವರ್ಷದ ವಿಶ್ವ ಜನಸಂಖ್ಯಾ ದಿನಾಚರಣೆಯ ಘೋಷವಾಕ್ಯವಾಗಿದ್ದು ಇದನ್ನು ಅನುಸರಿಸಿಕೊಂಡು ಕುಟುಂಬ ಮತ್ತು ದೇಶ ಬಲಪಡಿಸೋಣ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಎನ್ ಅಶೋಕಕುಮಾರ ಮಾತನಾಡಿ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಒಂದು ಅತ್ಯಮೂಲ್ಯ ಸಂಪನ್ಮೂಲ ಆದರೆ ಅದು ಮಿತಿಮೀರಿದರೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ವಿಶ್ವದ ಜನಸಂಖ್ಯೆ 718 ಕೋಟಿ ಇದ್ದು, ವಿಶ್ವದ ಒಟ್ಟು ಜನಸಂಖ್ಯೆಗೆ ಭಾರತದ ಕೊಡುಗೆ 17% ರಷ್ಟು. ಇವರೆಲ್ಲರಿಗೂ ಪೌಷ್ಟಿಕ ಆಹಾರ, ಶುದ್ದ ಕುಡಿಯುವ ನೀರು, ವಸತಿ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸವಾಗುತ್ತದೆ. ಈ ಹಿನ್ನಲೆಯಲ್ಲಿ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರವಾರ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕ ವಿ.ಎಮ್.ಗಿರಿ ಜನಸಂಖ್ಯೆ ಮತ್ತು ಲಿಂಗ ಸಮಾನತೆ ಕುರಿತು ಉಪನ್ಯಾಸ ನೀಡಿ ಜನಸಂಖ್ಯೆ ಹೆಚ್ಚಳದಿಂದ ಲಿಂಗಸಮಾನತೆ ಸಾಧಿಸಲಾಗುತ್ತಿಲ್ಲ. ಹೆಣ್ಣನ್ನು ಇಂದಿಗೂ ಗಂಡಿಗೆ ಸಮಾನಳು ಎಂದು ಪರಿಗಣಿಸಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಲಿಂಗ ತಾರತಮ್ಯ ಹೋಗಲಾಡಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂಧಿ ಉಪಸ್ಥಿತರಿದ್ದರು.