ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತ ದಿಂದ ವ್ಯಾಪಕ ಬಂದೋಬಸ್ತ್

ಚಿಕ್ಕಮಗಳೂರು, ಡಿ 8 :    ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ  ಇದೇ 10 ರಿಂದ ಆಯೋಜಿಸಿರುವ ಮೂರು ದಿನಗಳ ದತ್ತ ಜಯಂತಿ  ಕಾರ್ಯಕ್ರಮದ ವೇಳೆ ಯಾವುದೇ  ಅಹಿತಕರ ಘಟನೆಗಳು  ನಡೆಯದಂತೆ  ತಡೆಯಲು  ಚಿಕ್ಕಮಗಳೂರು ಜಿಲ್ಲಾಡಳಿತ  ವ್ಯಾಪಕ ಭದ್ರತಾ ವ್ಯವಸ್ಥೆ  ಕೈಗೊಂಡಿದೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ  ನಿಷೇಧಾಜ್ಞೆಯನ್ನು  ಜಿಲ್ಲಾಧಿಕಾರಿ ಬಗಡಿ ಗೌತಮ್  ಜಾರಿಗೊಳಿಸಿದ್ದಾರೆ.  ಜಿಲ್ಲೆಯ ಸೂಕ್ಷ್ಮ  ಪ್ರದೇಶಗಳಲ್ಲಿ 35 ಚೆಕ್ ಪೋಸ್ಟ್ ಗಳನ್ನು  ಆರಂಭಿಸಲು ಸೂಚನೆ ಹೊರಡಿಸಿದ್ದು,  ಸೋಮವಾರ ಮಧ್ಯರಾತ್ರಿಯಿಂದಲೇ  ಜಿಲ್ಲೆಯಲ್ಲಿ  ಮದ್ಯ ಮಾರಾಟ ನಿರ್ಬಂಧಿಸಲಾಗುವುದು   ಎಂದು ತಿಳಿಸಿದ್ದಾರೆ. ಕೆ.ಎಂ ರೋಡ್, ಐಜಿ ರೋಡ್, ಆರ್ ಜಿ ರೋಡ್,  ಬಸವನಹಳ್ಳಿ ರಸ್ತೆಗಳಲ್ಲಿರುವ  ಕಾಯಂ ಅಂಗಡಿ ಮಳಿಗೆಗಳನ್ನು  ಕಾರ್ಯಕ್ರಮದ ಕೊನೆಯ ದಿನವಾದ ಡಿಸೆಂಬರ್ 12 ರಂದು ಮುಚ್ಚಿಸಲಾಗುವುದು. ಅಲ್ದೂರು ಪಟ್ಟಣ ಹಾಗೂ  ಹಂಡಿ,ಭೂತನ ಕಾಡು ಹಾಗೂ  ವಸ್ತಾರೆ ಸಂಪರ್ಕಿಸುವ ರಸ್ತೆಗಳಲ್ಲಿನ ಅಂಗಡಿ  ಮುಂಗಟ್ಟು ಸಹ ಮುಚ್ಚಿಸಲಾಗುವುದು ಎಂದು  ಜಿಲ್ಲಾಧಿಕಾರಿ   ಬಗಡಿ ಗೌತಮ್    ಶನಿವಾರ  ನಡೆಸಿದ  ಸುದ್ದಿ ಗೋಷ್ಟಿಯಲ್ಲಿ  ತಿಳಿಸಿದರು.