ಲಾಕ್‌ಡೌನ್‌ನಿಂದ ವಸತಿ ಪ್ರದೇಶ, ಮಾರುಕಟ್ಟೆ ಸಂಕೀರ್ಣಗಳಲ್ಲಿನ ಅಂಗಡಿಗಳಿಗೆ ವಿನಾಯಿತಿ

ನವದೆಹಲಿ, ಏಪ್ರಿಲ್ 25,ಸಾರ್ವಜನಿಕರಿಗೆ ಪರಿಹಾರ ಒದಗಿಸಿಕೊಡುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯ ವಸತಿ   ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿರುವ ಅಂಗಡಿಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆ.ಶುಕ್ರವಾರ   ತಡರಾತ್ರಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸಹಿ ಮಾಡಿರುವ ಆದೇಶದಂತೆ ವಸತಿ   ಸಂಕೀರ್ಣಗಳು, ಮಾರುಕಟ್ಟೆ ಸಂಕೀರ್ಣಗಳು, ನೆರೆಹೊರೆ ಅಂಗಡಿಗಳು   ಸೇರಿದಂತೆ ಸಂಬಂಧಿತ ರಾಜ್ಯ ಮತ್ತು ಕೇಂದ್ರ ಪ್ರದೇಶಗಳ ಅಂಗಡಿಗಳು ಮತ್ತು ಮುಂಗಟ್ಟು ಕಾಯ್ದೆಯಡಿ ನೋಂದಾಯಿಸಲಾದ ಎಲ್ಲಾ ಅಂಗಡಿಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ. ಶೇ 50ರಷ್ಟು ಕೆಲಸದವರೊಂದಿಗೆ   ಮುಖಗವಸು ಧರಿಸುವ ಮತ್ತು   ಸಾಮಾಜಿಕ ಅಂತರದ ಮಾನದಂಡಗಳನ್ನು   ಅನುಸರಿಸಿ ಅಂಗಡಿಗಳು ಮತ್ತೆ ತೆರೆಯಲು   ಅವಕಾಶ ನೀಡಲಾಗಿದೆ.
ಈ ವಿನಾಯಿತಿ ಪುರಸಭೆ, ನಗರಪಾಲಿಕೆ ವ್ಯಾಪ್ತಿಗಳ ಹೊರಗೆ ಬಹು-ಬ್ರಾಂಡ್   ಮತ್ತು ಏಕ-ಬ್ರಾಂಡ್ ಮಾಲ್‌ಗಳಲ್ಲಿನ ಅಂಗಡಿಗಳಿಗೆ ಅನ್ವಯಿಸುವುದಿಲ್ಲ. ಈ ಪ್ರದೇಶಗಳ ಅಂಗಡಿಗಳು ಮೇ 3 ರವರೆಗೆ ಮುಚ್ಚಿರುತ್ತವೆ. ಪವಿತ್ರ ರಂಜಾನ್   ತಿಂಗಳ ಮುನ್ನಾದಿನದಂದು ವಸತಿ ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿ ಅಂಗಡಿಗಳನ್ನು ಮತ್ತೆ ತೆರೆಯವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ.   ಕಂಟೈನ್‍ಮೆಂಟ್‍ ಮತ್ತು ಹಾಟ್‍ಸ್ಪಾಟ್   ಪ್ರದೇಶಗಳಲ್ಲಿನ ಅಂಗಡಿಗಳಿಗೆ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಶೈಕ್ಷಣಿಕ   ಪುಸ್ತಕ ಮಳಿಗೆಗಳು ಮತ್ತು ವಿದ್ಯುತ್‍   ಫ್ಯಾನ್‍ ಗಳ ಅಂಗಡಿಗಳನ್ನು ಪುನಃ ತೆರೆಯಲು ಅವಕಾಶ ಮಾಡಿಕೊಟ್ಟ ಕೆಲವು ದಿನಗಳ   ನಂತರ ಗೃಹಸಚಿವಾಲಯ ಜನರಿಗೆ ತೊಂದರೆಗಳನ್ನು ತಪ್ಪಿಸಲು ನಿರ್ಬಂಧಗಳನ್ನು   ಸಡಿಲಗೊಳಿಸಿದೆ.