ಸಂಭ್ರಮದ ಕಾರಹುಣ್ಣಿಮೆ: ವಿಜಯಪುರದಲ್ಲಿ ಗಮನ ಸೆಳೆದ ಎತ್ತಿನ ಚಕ್ಕಡಿ ಓಟ

ವಿಜಯಪುರ 17: ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಕಾರಹುಣ್ಣಿಮೆ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಕಾರಹುಣ್ಣಿಮೆ ಅಂಗವಾಗಿ ರೈತರು ತಮ್ಮ ದನ-ಕರುಗಳು, ಎತ್ತು, ಹೋರಿಗಳ ಮೈ ತೊಳೆದು ವಿವಿಧ ಬಣ್ಣಗಳಿಂದ ಶ್ರಂಗಾರ ಮಾಡಿ ಪೂಜೆ ಸಲ್ಲಿಸಿದರು. ಸಂಜೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಪ್ರದಾಯದಂತೆ ಎತ್ತು ಓಡಿಸುವ, ಚಕ್ಕಡಿ ಓಡಿಸುವ ಹಾಗೂ ಕರಿ ಹರಿ ಹರಿಯುವ ಕಾರ್ಯಕ್ರಮ ವೈಭವದಿಂದ ನಡೆಯಿತು. 

ಪ್ರತಿ ವರ್ಷದಂತೆ ಈ ವರ್ಷವೂ ವಿಜಯಪುರ ನಗರದ ಕನಕದಾಸ ಬಡಾವಣೆಯ ಬಳಿ ಇರುವ ವಿಶಾಲವಾದ ಮೈದಾನದಲ್ಲಿ ಒಂಟೆತ್ತಿನ (ಎಕ್ಕಾಗಾಡಿ), ಜೋಡೆತ್ತಿನ ಚಕ್ಕಡಿಗಳನ್ನು ಓಡಾಡಿಸುವ ಮೂಲಕ ರೈತರು ಸಂಭ್ರಮಪಟ್ಟರು.

ಹಗುರವಾದ ಚಕ್ಕಡಿಗಳನ್ನು ಎಳೆಯುತ್ತ ಎತ್ತುಗಳು ಶರವೇಗದಲ್ಲಿ ಓಡುತ್ತಿರುವುದನ್ನು ನೋಡುತ್ತ ಜನರು ಶೀಳ್ಳೆ, ಕೇಕೆ ಹಾಕುತ್ತ ಚಕ್ಕಡಿ ಓಡಿಸುವವರಿಗೆ ಹುರಿದುಂಬಿಸುತ್ತಿದ್ದುದು ವಿಸೇಷವಾಗಿತ್ತು. ಎತ್ತುಗಳ ಚಕ್ಕಡಿ ಓಟ ರೋಮಾಂಚನಕಾರಿಯಾಗಿತ್ತು. ಸಾರ್ವಜನಿಕರು ಕುತೂಹಲದಿಂದ ಚಕ್ಕಡಿ ಓಟ ವಕ್ಷಿಸುತ್ತಿದ್ದುದು ಕಂಡು ಬಮತು. ಚಕ್ಕಡಿ ಓಟ ಮಕ್ಕಳಿಗಂತೂ ಭಾರೀ ಖುಷಿ ತಂದುಕೊಟ್ಟಿತು. 

ಎಕ್ಕಾಗಾಡಿ, ಜೋಡೆತ್ತಿನ ಚಕ್ಕಡಿ, ಕುದುರೆ ಸವಾರಿ, ಚಕ್ಕಡಿಗೆ ಎತ್ತು-ಕುದುರೆ ಕಟ್ಟಿ ಓಡಿಸುವುದು ಎಲ್ಲರ ಗಮನ ಸೆಳೆಯಿತು. ಮಧ್ಯಾಹ್ನ ಮೂರು ಗಂಟೆಯಿಮದ ಆರಂಭವಾದ ಚಕ್ಕಡಿ ಓಟ ಸಂಜೆಯವರೆಗೂ ನಡೆಯಿತು. ಚಕ್ಕಡಿ ಓಟ ವೀಕ್ಷಿಸಲು ಮೈದಾನದ ಸುತ್ತಲೂ ಬಡಾವಣೆಗಳ ಜನರು ಕಿಕ್ಕಿರಿದು ಸೇರಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.