ಸಂಪುಟದಲ್ಲಿ ಅವಕಾಶ ಸಿಕ್ಕಿದವರಿಗೆ ಹರ್ಷ: ಸಿಗದವರಿಗೆ ಬೇಸರ

 ಬೆಂಗಳೂರು, ಆ 20       ಸಂಪುಟದಲ್ಲಿ ಅವಕಾಶ ಸಿಕ್ಕಿದವರು ಹರ್ಷ ವ್ಯಕ್ತಪಡಿಸಿದರೆ, ಅವಕಾಶ ಸಿಗದವರು ಬೇಸರ ಹಾಗೂ ನಿರಾಸೆ ವ್ಯಕ್ತಪಡಿಸಿದ್ದಾರೆ. ರಾಜುಗೌಡ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಉಮೇಶ್ ಕತ್ತಿ ಮುಂತಾದ ಘಟಾನುಘಟಿಗಳಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಅವರು ಅಸಮಾಧಾನಗೊಂಡಿದ್ದರೂ, ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಅವರ ಬೆಂಬಲಿಗರು, ಆಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು, ಆದರೆ ಸಿಕ್ಕಿಲ್ಲ. ಮಂತ್ರಿಗಿರಿ ಕೈತಪ್ಪಿದ್ದರಿಂದ ಬೇಸರವೇನೂ ಇಲ್ಲ, ಮುಂದಿನ ಬಾರಿ ಅವಕಾಶ ಸಿಗಬಹುದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪ್ರತಿಕ್ರಿಯಿಸಿದ್ದಾರೆ. ಶಾಸಕ ರಾಜು ಗೌಡ ಕೂಡ ಬೇಸರ ವ್ಯಕ್ತಪಡಿಸಿ, ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಕೈತಪ್ಪಿದೆ. ಇದು ಕೂಡ ಜೀವನದ ಒಂದು ಪಾಠ ಎಂದು ಪ್ರತಿಕ್ರಿಯಿಸಿದ್ದಾರೆ. 'ನಾನು ಖಾತೆಗಾಗಿ ಖ್ಯಾತೆ ಮಾಡುವವನಲ್ಲ. ಮುಖ್ಯಮಂತ್ರಿಗಳು ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿಬಾಯಿಸುತ್ತೇನೆ. ಸಂಪುಟ ವಿಸ್ತರಣೆ ದೊಡ್ಡ ಕಸರತ್ತು. ಅದನ್ನು ನಮ್ಮ ನಾಯಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಚಿವ ಸ್ಥಾನಕ್ಕಾಗಿ ನಾನು ಲಾಭಿ ನಡೆಸಿಲ್ಲ, ಅದೇ ರೀತಿ ಖಾತೆಗಾಗಿಯೂ ಲಾಭಿ ನಡೆಸುವುದಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು. ಶಾಸಕ ಆರ್.ಅಶೋಕ್ ಮಾತನಾಡಿ, ಪಕ್ಷ ನನಗೆ ಈ ಹಿಂದೆ ಉಪಮುಖ್ಯಮಂತ್ರಿ, ಗೃಹ, ಸಾರಿಗೆ ಇಲಾಖೆಗಳ ಜವಾಬ್ದಾರಿ ನೀಡಿತ್ತು. ಮಂತ್ರಿ ಸ್ಥಾನ ನನಗೆ ಹೊಸದೇನಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಆಶಯವಾಗಿತ್ತು. ಅದು ಈಗ ಸಫಲವಾಗಿದೆ. ಸಚಿವ ಸ್ಥಾನ ಸಿಗದವರು ನಿರಾಶರಾಗಬಾರದು. ಮುಂದಿನ  ದಿನಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರ ನಡೆಸುತ್ತೇವೆ ಎಂದರು. 17 ಮಂದಿ ಸಚಿವರ ಪೈಕಿ ನಾನೊಬ್ಬಳೇ ಮಹಿಳೆ ಎನ್ನುವ ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ಆಶ್ಚರ್ಯ ತಂದಿದೆ. ಮುಂದಿನ ಪಟ್ಟಿಯಲ್ಲಿ ಅವರನ್ನು ಪರಿಗಣಿಸಬಹುದು ಎನ್ನುವ ನಂಬಿಕೆ ಇದೆ ಎಂದು ಶಶಿಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಹಳ ಸಂತೋಷವಾಗಿದೆ. ಹದಿನೇಳು ಜನರಲ್ಲಿ ನಾನೊಬ್ಬಳೇ ಮಹಿಳೆ. ಮಹಿಳೆಯರ ಅಭಿವೃದ್ಧಿ ಹಾಗೂ ಪ್ರವಾಹದಿಂದ ನಲುಗಿರುವ ಬೆಳಗಾವಿ ಭಾಗಕ್ಕೆ ಸಹಾಯವಾಗುವಂತೆ ಕೆಲಸ ಮಾಡುತ್ತೇನೆ. ಸಂಘಟನೆ, ಕೆಲಸವನ್ನು ನೋಡಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದರು. ನನಗೆ ಸ್ಥಾನಮಾನ ಸಿಗುವ ಬಗ್ಗೆ ವಿಶ್ವಾಸವಿತ್ತು. ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು. ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿರುವುದರಿಂದ ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಪರಿಹಾರ ಕಾರ್ಯದಲ್ಲಿ ಕಾರ್ಯಾನ್ಮುಖರಾಗುತ್ತಾರೆ. ಎಲ್ಲರೂ ಸಂಬಂಧಪಟ್ಟ ಜಿಲ್ಲೆಗೆ ಪ್ರವಾಸ ಕೈಗೊಂಡು ಪರಿಹಾರ ಕಾರ್ಯ ಚುರುಕುಗೊಳಿಸಲಿದ್ದಾರೆ, ಈಗಾಗಲೇ ಮುಖ್ಯಮಂತ್ರಿ ಕೂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡು ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರೊಂದಿಗೆ ಸಮಾಲೋಚಿಸಿ ಬಿಡುಗಡೆ ಮಾಡಿದೆ. ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.