ಲೋಕದರ್ಶನ ವರದಿ
ಜಾತಿ ಸಮೀಕ್ಷೆಗಾಗಿ ಎಲ್ಲರೂ ಮಾಹಿತಿ ನೀಡಿ ಸಹಕರಿಸಿ: ತಹಶೀಲ್ದಾರ ಮುಂಜೆ
ರಾಯಬಾಗ, 05 : ಸರ್ಕಾರದ ಆದೇಶದ ಮೇರೆಗೆ ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗಾಗಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ತಾಲೂಕಿನ ಎಲ್ಲ ಜನರು ಮಾಹಿತಿ ನೀಡಿ ಸಹಕರಿಸಬೇಕೆಂದು ತಹಶೀಲ್ದಾರ ಸುರೇಶ ಮುಂಜೆ ಹೇಳಿದರು.
ಸೋಮವಾರ ಪಟ್ಟಣದ ಸಾಯಿನಗರದಲ್ಲಿ ಸುಧೀರ ಕಳ್ಳೆ ಅವರ ಮನೆಗೆ ಸಮೀಕ್ಷೆ ತಂಡದೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು, ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿಗಳ ಸಮಗ್ರ ದತ್ತಾಂಶ ಸಂಗ್ರಹಕ್ಕಾಗಿ ಮನೆಗಳಿಗೆ ಬರುವ ಶಿಕ್ಷಕರಿಗೆ ನಿಖರವಾಗಿ ಎಲ್ಲ ಮಾಹಿತಿಯನ್ನು ಸರಿಯಾಗಿ ನೀಡಿ, ಸಮೀಕ್ಷೆ ಯಶಸ್ವಿಗೆ ಸಹಕರಿಬೇಕು. ದತ್ತಾಂಶಗಳನ್ನು ಆ್ಯಂಡ್ರಾಯ್ಡ್ ಆ್ಯಪ್ ಮೂಲಕ ಮೊಬೈಲ್‌ಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ, ಸಮೀಕ್ಷೆಗೆ ಬರುವ ಶಿಕ್ಷಕರಿಗೆ ಸಂಪೂರ್ಣವಾದ ನಿಖರ ಮತ್ತು ಸತ್ಯವಾದ ಮಾಹಿತಿ ನೀಡುವಂತೆ ಕೋರಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಚಂದರಗಿ, ಶಿಕ್ಷಕಿ ಶ್ರೀದೇವಿ ಪಾಟೀಲ, ತಾರಾಬಾಯಿ ಕಳ್ಳೆ, ಸುಧೀರ ಕಳ್ಳೆ ಇದ್ದರು.