ಹೊನ್ನಾವರ 06: ಪ್ರತಿಯೊಬ್ಬರು ಧರ್ಮ ಪಾಲನೆಯ ಮೂಲಕ ಸನ್ನಡತೆಯಲ್ಲಿ ಸಾಗಬೇಕಿದೆ. ಯಾರಿಗೂ ತೊಂದರೆ ಮಾಡದಂತೆ ಬದುಕುವುದೇ ನಿಜವಾದ ಧರ್ಮ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಎಂ.ಬಿ. ನರಗುಂದ ಹೇಳಿದರು.
ಅವರು ತಾಲೂಕಿನ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ವತಿಯಿಂದ ಗೇರಸೊಪ್ಪದ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವ ಹಾಗೂ ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರಾ ಮಹೋತ್ಸವದ ಹಾಗೂ ಪೂಜ್ಯ ಗುರೂಜಿ ಅವರ ಪೀಠಾರೋಹಣದ ರಜತ ಮಹೋತ್ಸವ ಸಮಾರಂಭದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.
ಯಾವುದರಿಂದ ಒಳ್ಳೆದಾಗುತ್ತೋ ಅದನ್ನು ಪಾಲಿಸುವುದೇ ಧರ್ಮ. ಪ್ರತಿಯೊಬ್ಬರಿಗೂ ಅವರು ಪಾಲಿಸಬೇಕಾದ ಧರ್ಮವಿರುತ್ತದೆ. ಮತ್ತೊಬ್ಬರಿಗೆ ತೊಂದರೆ ಕೊಡದಂತೆ ಮಾನವ ಧರ್ಮ ಹಾಗೂ ವೃತ್ತಿ ಧರ್ಮವನ್ನು ಸರಿಯಾಗಿ ಪಾಲಿಸಬೇಕಿದೆ. ಪ್ರತಿಯೊಬ್ಬರು ಧರ್ಮದ ವ್ಯಾಖ್ಯಾನ ಅರಿತು ಸರಿ ದಾರಿಯಲ್ಲಿ ಸಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ಕ್ಷೇತ್ರದ ಧರ್ಮದರ್ಶಿ ಪೂಜ್ಯ ಮಾರುತಿ ಗುರೂಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಜನರು ಹೇಗೆ ಬದುಕಬೇಕು ಎನ್ನುವುದರ ಕುರಿತು ಶ್ರೀರಾಮಚಂದ್ರ ನೆಲದ ಹಕ್ಕನ್ನು ಹಾಕಿಕೊಟ್ಟ ಹೋದ. ಪ್ರಸ್ತುತ ದಿನಗಳಲ್ಲಿ ಮಾನವೀಯತೆಯ ಮೌಲ್ಯವನ್ನು ನಾವು ಅರಿಯಬೇಕಿದೆ.
ಧರ್ಮಕ್ಕೆ ರಾಮನೇ ಸಂದೇಶಗಳೇ ಸೂಕ್ತ ಮಾರ್ಗದರ್ಶನವಾಗಿದೆ. ಅವರವರ ಕೆಲಸಕ್ಕೆ ಅವರವರ ಧರ್ಮವಿರುತ್ತದೆ. ಹೀಗಾಗಿ ಧರ್ಮ ವ್ಯಕ್ತಿಗತವಾಗಿದೆ. ಧರ್ಮವೆಂದರೆ ಯಾವ ಜಾತಿಗೆ ಸೀಮಿತವಾಗಿಲ್ಲ. ಆದರೂ ಧರ್ಮಕ್ಕೆ ಜಾತಿ ಪಟ್ಟಿಕಟ್ಟಿ ಕುಣಿದಾಡಿಸುತ್ತಿದ್ದಾರೆ. ಇಂದು ಧರ್ಮವನ್ನು ವಿಶ್ಲೇಶಿಸುವ, ವ್ಯಾಖ್ಯಾನಿಸುವ ರೀತಿ ಬೇರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕೀಯ ವ್ಯಕ್ತಿಗಳು ಕೂಡ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜವನ್ನು ಹೇಗೆ ನೋಡಬೇಕು ಎನ್ನುವುದನ್ನು ರಾಮನಿಂದ ಕಲಿಯಬೇಕಿದೆ. ಆದರೆ ರಾಮನ ಹೆಸರು ಹೇಳಿಕೊಂಡು ಎಲ್ಲ ತಪ್ಪನ್ನು ಮಾಡುವ ರಾಜಕಾರಣಿಗಳು ನಮ್ಮ ಮದ್ಯೆ ಇದ್ದಾರೆ. ಸಮಾಜವಿಂದು ದಿಕ್ಕು ತಪ್ಪುತ್ತಿದೆ, ಇಲ್ಲಿ ಧರ್ಮದ ಅವಶ್ಯಕತೆ ಇದೆ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವಿಸಬೇಕಿದೆ.
ರಾಮಾಯಣ ಈ ನೆಲದಲ್ಲಿಯೇ ನಡೆದಿದೆ, ರಾಮ ಇಲ್ಲಯೇ ನಡೆದಾಡಿದ್ದಾನೆ, ಆದರೂ ನಮಗೇಕೆ ರಾಮಾಯಣ ಸರಿಯಾಗಿ ಅರ್ಥವಾಗುತ್ತಿಲ್ಲ. ಕುರ್ಚಿಗಾಗಿ ಲೆಕ್ಕಾಚಾರ ಹಾಕುತ್ತಾ ಸಮಾಜವನ್ನು ತುಳಿಯುತ್ತ ನಾವು ಬದುಕುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಎನ್.ವಿ. ಯಾಜಿ, ಪತ್ರಕರ್ತರಾದ ನೂರ ಅಹ್ಮದ್ ಮಕಾನದಾರ, ಭವಾನಿ ಶಂಕರ್, ಮಾಗೋಡು ಗ್ರಾಪಂ ಅಧ್ಯಕ್ಷ ಗಣೇಶ ಶಿವರಾಮ ಹೆಗಡೆ, ಕೃಷ್ಣಾ ಮರಾಠೆ ಮಾತನಾಡಿದರು.
ಶೈಲೇಶ್ ಕಾರ್ಯಕ್ರಮ ನಿರೂಪಿಸಿ, ಜಿ.ಟಿ. ಹೆಗಡೆ ಸ್ವಾಗತಿಸಿ, ಸುಧಾಕರ ಕಟ್ಟಿಮನಿ ವಂದಿಸಿದರು.