ಸಂವಿಧಾನದ ಆಶಯವನ್ನು ಎಲ್ಲರೂ ಪಾಲಿಸಿ: ಜಿಲ್ಲಾಧಿಕಾರಿ ಸುನೀಲ್ಕುಮಾರ್

ಕೊಪ್ಪಳ 26: ಸಂವಿಧಾನ ನಮ್ಮ ದೇಶದ ಸಾಮಾಜಿಕ ಪ್ರಗತಿಯ ಕೈಗನ್ನಡಿ ಇದ್ದಂತೆ. ಆಡಳಿತ, ನಿತ್ಯ ಜೀವನ, ಕಾನೂನು ಮುಂತಾದ ವಿಷಯಗಳಿಗೆ ಸಂವಿಧಾನ ಮಾರ್ಗದಶರ್ಿಯಾಗಿದ್ದು, ಸಂವಿಧಾನದ ಆಶಯವನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು(ನ.26) ಹಮ್ಮಿಕೊಂಡಿದ್ದ ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಓದಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನ ನಮಗೆಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ನೀಡಿದೆ. ಈ ಕುರಿತು ಸಂವಿಧಾನಕ್ಕೆ ನಾವೆಲ್ಲರೂ ಆಭಾರಿಗಳಾಗಿರಬೇಕು. ಸಂವಿಧಾನ ನಮಗೆ ನೀಡಿದ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡು ಸಂವಿಧಾನದ ಉದ್ದೇಶವನ್ನು ಸಾರ್ಥಕಪಡಿಸಬೇಕು. ಡಾ. ಬಿ. ಆರ್. ಅಂಬೇಡ್ಕರ್ರವರು ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆ ಸಂವಿಧಾನ ಎನ್ನಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಭುರಾಜ ನಾಯಕ ರವರು ಡಾ. ಬಿ. ಆರ್. ಅಂಬೇಡ್ಕರ್ರವರ ಹೋರಾಟ ಹಾಗೂ ಸಂವಿಧಾನ ರಚನೆ ಹಾಗೂ ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ  ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.